ADVERTISEMENT

ಹಂಪಿಯಲ್ಲಿ ವರ್ಷವಿಡೀ ರಂಗುರಂಗಿನ ಕಾರ್ಯಕ್ರಮ

ಉತ್ಸವದ ಸಿದ್ಧತೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 15:02 IST
Last Updated 5 ನವೆಂಬರ್ 2019, 15:02 IST
ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಮಂಗಳವಾರ ಹಂಪಿಯಲ್ಲಿ ಉತ್ಸವದ ಸಿದ್ಧತೆ ಪರಿಶೀಲನೆ ನಡೆಸಿದರು
ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಮಂಗಳವಾರ ಹಂಪಿಯಲ್ಲಿ ಉತ್ಸವದ ಸಿದ್ಧತೆ ಪರಿಶೀಲನೆ ನಡೆಸಿದರು   

ಹೊಸಪೇಟೆ: ‘ಹಂಪಿಯಲ್ಲಿ ವರ್ಷವಿಡೀ ಕಾರ್ಯಕ್ರಮಗಳನ್ನು ಸಂಘಟಿಸಿ ದೇಶ–ವಿದೇಶದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ತಿಳಿಸಿದರು.

ಮಂಗಳವಾರ ಹಂಪಿ ಉತ್ಸವದ ಸಿದ್ಧತೆ ಪರಿಶೀಲನೆ ನಡೆಸಿ, ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರ ಸಾಂಸ್ಕೃತಿಕ, ವಿಷಯಾಧಾರಿತ , ಮ್ಯಾರಾಥಾನ್ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಕುರಿತು ಸಮಗ್ರ ಯೋಜನೆ ರೂಪಿಸಬೇಕು’ ಎಂದು ಉಪವಿಭಾಗಾಧಿಕಾರಿ ತನ್ವೀರ್‌ ಶೇಖ್‌ ಆಸೀಫ್‌ ಅವರಿಗೆ ಸೂಚಿಸಿದರು.

‘ಜ. 11, 12ರಂದು ನಡೆಯಲಿರುವ ಹಂಪಿ ಉತ್ಸವಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಸ್ವಚ್ಛತಾ ಕೆಲಸ ಶುರು ಮಾಡಬೇಕು. ನಾಲ್ಕು ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

‘ಉತ್ಸವಕ್ಕೆ ಸಂಬಂಧಿಸಿ ಹತ್ತು ದಿನದೊಳಗೆ ಅಂದಾಜು ವೆಚ್ಚ‌, ಕಾರ್ಯಕ್ರಮಗಳ ವಿವರ, ಹೊಸದಾಗಿ ಪ್ರಸ್ತಾಪಿಸಬೇಕಾದ ಕಾರ್ಯಕ್ರಮ ಸೇರಿದಂತೆ ವಿವರವಾದ ವರದಿಯನ್ನು ಸಮಿತಿ ಸಭೆ ನಡೆಸಿ ನೀಡಬೇಕು’ ಎಂದು ಸೂಚಿಸಿದರು.

‘ಈ ಹಿಂದಿನಂತೆವಿಜಯನಗರ ವೈಭವ, ತುಂಗಾ ಆರತಿ, ಹಂಪಿ ಬೈ ನೈಟ್, ಹಂಪಿ ಬೈ ಸ್ಕೆ, ಧ್ವನಿ ಮತ್ತು ಬೆಳಕು,ಶ್ವಾನ ಪ್ರದರ್ಶನ, ಕುಸ್ತಿ ಸ್ಪರ್ಧೆ, ಮೆಹಂದಿ, ರಂಗೋಲಿ ಸ್ಪರ್ಧೆ, ಕರಕುಶಲ ವಸ್ತುಗಳ ಪ್ರದರ್ಶನ, ದೇಸಿ ಆಹಾರ, ಫಲಪುಷ್ಪ ಪ್ರದರ್ಶನ, ಶಿಲ್ಪಕಲಾ ಶಿಬಿರ, ಚಿತ್ರಕಲಾ ಶಿಬಿರ, ಛಾಯಾಚಿತ್ರ ಸ್ಪರ್ಧೆ ನಡೆಯಲಿವೆ. ಹೊಸದಾಗಿ ವಿಂಟೇಜ್‌ ಕಾರು ರ್‍ಯಾಲಿ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.‌

ಜಿಲ್ಲಾ ಪಂಚಾಯಿತಿ ಸಿ.ಇ.ಒ. ಕೆ.ನಿತೀಶ್, ಪ್ರೊಬೆಷನರಿ ಐ.ಎ.ಎಸ್. ಈಶ್ವರ್ ಕಾಂಡೂ, ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ, ಉಪವಿಭಾಗಾಧಿಕಾರಿ ರಮೇಶ ಕೋನರೆಡ್ಡಿ, ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕ ರಮೇಶ, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಪಿ.ಎನ್.ಲೋಕೇಶ್‌, ಎ.ಎಸ್‌.ಐ. ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.