ADVERTISEMENT

ಉತ್ತರ ಕರ್ನಾಟಕ ರಾಜ್ಯ ಹೋರಾಟಕ್ಕೆ ಬೆಂಬಲ:ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 27 ಜುಲೈ 2018, 6:15 IST
Last Updated 27 ಜುಲೈ 2018, 6:15 IST
   

ಬಳ್ಳಾರಿ: ‘ಉತ್ತರ ಕರ್ನಾಟಕ ಬಂದ್‌ಗೆ ವೈಯಕ್ತಿಕವಾಗಿ ಬೆಂಬಲ ನೀಡುವೆ. ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆದರೆ ನೇತೃತ್ವ ವಹಿಸಲೂ ಸಿದ್ಧ’ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಹೇಳಿದರು.

‘ಪ್ರತ್ಯೇಕ ರಾಜ್ಯದ ಕೂಗು ಬಲಗೊಳ್ಳುವ ಮುನ್ನ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಆಂಧ್ರ ವಿಭಜನೆಯಾದಂತೆ ಕರ್ನಾಟಕವೂ ವಿಭಜನೆಯಾಗಬಾರದು’ ಎಂದು ನಗರದ ತಮ್ಮ ಮನೆಯಲ್ಲಿ ಶುಕ್ರವಾರ ಪ್ರತಿಪಾದಿಸಿದರು.

‘ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ. ತಾವು ಕೇವಲ ಐದಾರು ಜಿಲ್ಲೆಗಳಿಗೆ ಮಾತ್ರ ಸೀಮಿತವಾದ ಮುಖ್ಯಮಂತ್ರಿ ಎಂಬಂತೆ ವರ್ತಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ರೈತರ ಎಲ್ಲ ಸಾಲವನ್ನೂ ಮನ್ನಾ ಮಾಡಲು ಅವರಿಗೆ ಆಗಿಲ್ಲ. ಆದರೆ ಮನ್ನಾ ಮಾಡಿರುವ ಸಾಲದ ಕುರಿತು ಅಧಿಸೂಚನೆಯನ್ನು ಇನ್ನೂ ಪ್ರಕಟಿಸಿಲ್ಲ. ಬಜೆಟ್‌ ಮಂಡನೆಯಾಗಿ ಇಪ್ಪತ್ತಕ್ಕೂ ಹೆಚ್ಚು ದಿನವಾಗಿದೆ’ ಎಂದು ದೂರಿದರು.

ರೈತರಿಗೆ ಅವಮಾನ: ಸಾಲ ಮನ್ನಾ ಕುರಿತು ಕೊಪ್ಪಳದಲ್ಲಿ ತಮ್ಮ ಗಮನ ಸೆಳೆದ ರೈತರೊಬ್ಬರ ಕುರಿತು ಮುಖ್ಯಮಂತ್ರಿ ಚೆನ್ನಪಟ್ಟಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಓಟು ಹಾಕುವಾಗ ಆ ರೈತರಿಗೆ ತಮ್ಮ ನೆನಪಾಗಲಿಲ್ಲವೇ ಎಂದು ಕೇಳುವ ಮೂಲಕ ಅವರು ಇಡೀ ರಾಜ್ಯದ ಹೊಣೆ ತಮ್ಮ ಮೇಲಿದೆ ಎಂಬುದನ್ನ ಮರೆತಿದ್ದಾರೆ. ಇನ್ನಾದರೂ ಉತ್ತರ ಕರ್ನಾಟಕ ಭಾಗಗಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಿ’ ಎಂದರು.

ಸೂಟ್‌ಕೇಸ್‌ ರಾಜಕಾರಣ: ‘ಜು.13ರಂದು ವಿಧಾನೌಧದಲ್ಲಿ ಅರಣ್ಯ ಸಚಿವರು ತಮ್ಮ ಪುತ್ರನೊಂದಿಗೆ ಅಧಿಕಾರಿಗಳ ಸಭೆ ನಡೆಸಿ ಹಣದ ಲೂಟಿ ಮಾಡಿದ್ದಾರೆ. ವಿಧಾನಸೌಧ ಮತ್ತು ವಿಕಾಸಸೌಧದಲ್ಲಷ್ಟೆ ಅಲ್ಲದೆ, ಅಲ್ಲಿಂದ ಸುಮಾರು 9 ಕಿಮೀ ದೂರದಲ್ಲಿರುವ ಮುಖ್ಯಮಂತ್ರಿ ಮನೆಯಲ್ಲೂ ಸೂಟ್‌ಕೇಸ್‌ ರಾಜಕಾರಣ ನಡೆಯುತ್ತಿದೆ. ಎಲ್ಲಿ ನೋಡಿದರೂ ಹಣವುಳ್ಳ ಸೂಟ್‌ಕೇಸ್‌ ಹಿಡಿದು ನಿಂತ ಅಧಿಕಾರಿಗಳೇ ಕಾಣಿಸುತ್ತಾರೆ. ಪಾರದರ್ಶಕ ಆಡಳಿತ ಕಾಣೆಯಾಗಿ, ವರ್ಗಾವಣೆ ದಂಧೆ ನಡೆಯುತ್ತಿದೆ. ತಾವು ಇನ್ನೆಷ್ಟು ದಿನ ಮುಖ್ಯಮಂತ್ರಿಯಾಗಿ ಇರಲು ಸಾಧ್ಯ ಎಂಬ ಅನಿಶ್ಚಿತತೆಯಲ್ಲಿ ಕುಮಾರಸ್ವಾಮಿ ಹಣ ಸಂಪಾದನೆಗೆ ಇಳಿದಿದ್ದಾರೆ’ ಎಂದು ಆರೋಪಿಸಿದರು.

ಕಣ್ಣೀರು:‘ಸಭೆಗಳಲ್ಲಿ ಕಣ್ಣೀರು ಹಾಕುವ ಮುನ್ನ ಮುಖ್ಯಮಂತ್ರಿ ಕಣ್ಣಿಗೆ ವಿಕ್ಸ್‌ ಹಚ್ಚಿಕೊಂಡು ಹೋಗುತ್ತಾರೆ ಎಂದು ಸಚಿವ ಜಮೀರ್‌ ಅಹ್ಮದ್‌ ಕುಹಕವಾಡಿದ್ದಾರೆ. ಡೋಂಗಿ ಕಣ್ಣೀರು ಹಾಕುವ ಬದಲು ಮುಖ್ಯಮಂತ್ರಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಪ್ರವಾಸ ಕೈಗೊಳ್ಳಲಿ’ ಎಂದು ಶ್ರೀರಾಮುಲು ಆಗ್ರಹಿಸಿದರು. ‘ವಿಧಾನಸೌಧಕ್ಕೆ ಪತ್ರಕರ್ತರನ್ನು ನಿಷೇಧಿಸುವ ಮೂಲಕ ಮುಖ್ಯಮಂತ್ರಿ ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.