ADVERTISEMENT

ಸ್ವಾವಲಂಬಿ ಬದುಕಿಗಾಗಿ ಹೊಲಿಗೆ ತರಬೇತಿ: ಮಹಿಳೆಯರಿಗೆ ನೆರವಾದ ‘ಸಹಾಯಮಾತಾ’

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ
Published 25 ಡಿಸೆಂಬರ್ 2025, 3:10 IST
Last Updated 25 ಡಿಸೆಂಬರ್ 2025, 3:10 IST
ಕಂಪ್ಲಿ ತಾಲ್ಲೂಕು ಪ್ರಭುಕ್ಯಾಂಪ್ ಸಹಾಯಮಾತಾ ಆಶ್ರಮದಲ್ಲಿ ಸಿಸ್ಟರ್ ವೆರೋನಿಕಾ ಯುವತಿಯರಿಗೆ ಹೊಲಿಗೆ ತರಬೇತಿ ಶಿಕ್ಷಣ ನೀಡುತ್ತಿರುವ ದೃಶ್ಯ
ಕಂಪ್ಲಿ ತಾಲ್ಲೂಕು ಪ್ರಭುಕ್ಯಾಂಪ್ ಸಹಾಯಮಾತಾ ಆಶ್ರಮದಲ್ಲಿ ಸಿಸ್ಟರ್ ವೆರೋನಿಕಾ ಯುವತಿಯರಿಗೆ ಹೊಲಿಗೆ ತರಬೇತಿ ಶಿಕ್ಷಣ ನೀಡುತ್ತಿರುವ ದೃಶ್ಯ   

ಕಂಪ್ಲಿ: ಶಿಕ್ಷಣ ಸಂಸ್ಥೆ ಜತೆಗೆ ಸ್ವಾವಲಂಬಿ ಜೀವನ ನಡೆಸಲು ಮಹಿಳೆಯರಿಗೆ ಹೊಲಿಗೆ ತರಬೇತಿ ಮತ್ತು ಸ್ವಸಹಾಯ ಸಂಘಗಳನ್ನು ರಚಿಸುವ ಮೂಲಕ ತಾಲ್ಲೂಕಿನ ಪ್ರಭುಕ್ಯಾಂಪ್ ಸಹಾಯಮಾತಾ ಆಶ್ರಮ ನಾರಿಯರ ಪಾಲಿನ ಸಂಜೀವಿನಿ ಎನಿಸಿಕೊಂಡಿದೆ. 

ಇತ್ತೀಚಿನ ದಿನಗಳಲ್ಲಿ ಹೊಲಿಗೆ ವೃತ್ತಿಗೆ ಬೇಡಿಕೆ ಕಂಡುಬರುತ್ತಿರುವುದರಿಂದ ಈ ಕುರಿತ ಶಿಕ್ಷಣ ಪಡೆಯಲು ಮಹಿಳೆಯರು, ಯುವತಿಯರು ಮುಂದೆ ಬರುತ್ತಿದ್ದಾರೆ. ತರಬೇತಿ ಪಡೆದವರು ತಮ್ಮ ದೈನಂದಿನ ಚಟುವಟಿಕೆಗಳ ಜತೆಗೆ ಆದಾಯದ ಮೂಲವಾಗಿ ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿಯೂ ಸದೃಢರಾಗುತ್ತಿದ್ದಾರೆ.

‘ರವಿಕೆ, ಫ್ರಾಕ್, ಪೆಟ್ಟಿಕೋಟ್, ಲಂಗ, ಚೂಡಿ ಸೇರಿದಂತೆ ಆಧುನಿಕ ಉಡುಪು ಹೊಲಿಯುವುದನ್ನು ಕಲಿಯುತ್ತಿದ್ದೇವೆ’ ಎಂದು ಆಶ್ರಮದಲ್ಲಿ ಕಲಿಯುತ್ತಿರುವ ಯುವತಿಯರಾದ  ಐಶ್ವರ್ಯ, ನಂದಿನಿ, ಸುನಿತಾ, ಮಂಜುಳಾ, ದೀಪಿಕಾ ತಿಳಿಸಿದರು.

ADVERTISEMENT

‘ಮಹಿಳೆಯರನ್ನು ಸ್ವ ಉದ್ಯೋಗಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಹೊಲಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿ ಕಲಿತ ವಿದ್ಯೆಯ ಸದುಪಯೋಗ ಪಡೆದು ಆರ್ಥಿಕ ಸಬಲತೆ ಸಾಧಿಸಬೇಕು ಎನ್ನುವುದು ನಮ್ಮ ಆಶ್ರಮದ ಮೂಲ ಉದ್ದೇಶ’ ಎಂದು ಹೊಲಿಗೆ ತರಬೇತಿ ನೀಡುವ ಸಿಸ್ಟರ್ ವೆರೋನಿಕಾ ತಿಳಿಸಿದರು.

ಮೂರು, ಐದು ತಿಂಗಳು ಹೊಲಿಗೆ ಶಿಕ್ಷಣ ನೀಡಲಾಗುತ್ತಿದ್ದು, ಹೊಲಿಗೆ ಕೇಂದ್ರದ ನಿರ್ವಹಣೆಗೆ ಪ್ರತಿ ತಿಂಗಳು ₹300 ಪ್ರತಿಯೊಬ್ಬರಿಂದ ಪಡೆಯುವುದಾಗಿ ತಿಳಿಸಿದರು.

ಈಗಾಗಲೇ ಹೊಲಿಗೆ ತರಬೇತಿ ಪಡೆದು ತಮ್ಮ ಬದುಕಿಗೊಂದು ಮಾರ್ಗ ಕಂಡುಕೊಂಡಿರುವುದಾಗಿ ಮಂಜುಳಾ, ಶಮೀನಾಬಾನು, ಕವಿತಾ, ಆಸ್ಮಾ ಅವರು ತಿಳಿಸಿದರು.

ಆಶ್ರಮದಿಂದ ಸ್ವಸಹಾಯ ಸಂಘಗಳನ್ನು ರಚಿಸಿದ್ದು, ಆ ಮೂಲಕ ಉಳಿತಾಯದ ಹಣದಲ್ಲಿ ಕೆಲವರು ಬಟ್ಟೆ ವ್ಯಾಪಾರ, ಅಂಗಡಿ ಇಟ್ಟುಕೊಂಡು ಬದುಕು ರೂಪಿಸಿಕೊಂಡಿದ್ದಾರೆ.

25ವರ್ಷಗಳಿಂದ ಹೊಲಿಗೆ ತರಬೇತಿ
ಮಹಿಳೆಯರು ಮತ್ತು ನಿರುದ್ಯೋಗಿ ಯುವತಿಯರು ಕೌಶಲ ಅಧಾರಿತ ತರಬೇತಿ ಪಡೆದು ಸ್ವ ಉದ್ಯೋಗ ಕೈಗೊಳ್ಳಬೇಕು ಎನ್ನುವ ಉದ್ದೇಶದಿಂದ ಕಳೆದ 25ವರ್ಷಗಳಿಂದ ಹೊಲಿಗೆ ತರಬೇತಿ ನೀಡಲಾಗುತ್ತಿದೆ. ಅದೇ ರೀತಿ ಸ್ವಸಹಾಯ ಸಂಘಗಳನ್ನು ರಚಿಸಿದ್ದು ಆ ಮೂಲಕ ಕೆಲವರು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. – ಸಿಸ್ಟರ್ ಬೆನ್ನಿ ಮುಖ್ಯಸ್ಥರು ಸಹಾಯಮಾತಾ ಆಶ್ರಮ ಪ್ರಭುಕ್ಯಾಂಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.