ADVERTISEMENT

ಅಲೆ ಕುಣಿಯ ಕಟ್ಟಿಗೆಯಲ್ಲಿ ಮೂಡಿದ ಗಣೇಶ!

ದೇವಸ್ಥಾನಕ್ಕೆ ಸ್ಥಳಾಂತರಿಸಿ ಪೂಜೆ ಸಲ್ಲಿಸಿದ ಮುಸ್ಲಿಮರು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 15:40 IST
Last Updated 14 ಆಗಸ್ಟ್ 2021, 15:40 IST
ಹೂವಿನಹಡಗಲಿ ತಾಲ್ಲೂಕು ಬಾವಿಹಳ್ಳಿಯಲ್ಲಿ ಅಲೆ ಕುಣಿಗೆ ಹಾಕಲು ತಂದಿದ್ದ ಕಟ್ಟಿಗೆಯಲ್ಲಿ ಮೂಡಿದ ಗಣೇಶ ವಿಗ್ರಹ ರೂಪಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು
ಹೂವಿನಹಡಗಲಿ ತಾಲ್ಲೂಕು ಬಾವಿಹಳ್ಳಿಯಲ್ಲಿ ಅಲೆ ಕುಣಿಗೆ ಹಾಕಲು ತಂದಿದ್ದ ಕಟ್ಟಿಗೆಯಲ್ಲಿ ಮೂಡಿದ ಗಣೇಶ ವಿಗ್ರಹ ರೂಪಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು   

ಹೂವಿನಹಡಗಲಿ: ತಾಲ್ಲೂಕಿನ ಬಾವಿಹಳ್ಳಿ ಗ್ರಾಮದಲ್ಲಿ ಮೊಹರಂ ಪ್ರಯುಕ್ತ ಅಲೆಕುಣಿಯಲ್ಲಿ ಕೊಂಡ ಹಾಯಲು ಸಂಗ್ರಹಿಸಿ ತಂದಿದ್ದ ಕಟ್ಟಿಗೆಯಲ್ಲಿ ಗಣೇಶನ ವಿಗ್ರಹ ಹೋಲುವ ರೂಪ ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.

ಗ್ರಾಮದ ಮಸೀದಿಯ ಮುಂಭಾಗದಲ್ಲಿ ತೋಡಲಾಗಿದ್ದ ಅಲೆ ಕುಣಿಯಲ್ಲಿ ಕೆಂಡವಾಗಿಸಲು ಶನಿವಾರ ಮರದ ದಿಮ್ಮಿಗಳನ್ನು ತಂದು ಹಾಕಲಾಗಿತ್ತು. ಕಟ್ಟಿಗೆ ರಾಶಿಯ ಒಂದು ಬೊಡ್ಡೆಯಲ್ಲಿ ಕಿರೀಟ ಧರಿಸಿದ ಗಣೇಶನ ಮೂರ್ತಿ ಹಾಗೂ ಸೊಂಡಿಲಿನಂತೆ ಕಾಣುವ ರೂಪ ಮೂಡಿರುವುದನ್ನು ಮುಸ್ಲಿಂ ಸಮುದಾಯದ ಯುವಕರು ಗುರುತಿಸಿ, ಹಿರಿಯರಿಗೆ ತಿಳಿಸಿದ್ದಾರೆ. ಈ ಸುದ್ದಿ ಹರಡುತ್ತಿದ್ದಂತೆ ಗ್ರಾಮದ ಜನರು ತಂಡ ತಂಡವಾಗಿ ಬಂದು ವೀಕ್ಷಿಸಿದ್ದಾರೆ.

ಮುಸ್ಲಿಂ ಯುವಕರು ಜೈಕಾರ ಹಾಕುತ್ತಾ ಗಣೇಶ ವಿಗ್ರಹ ಹೋಲುವ ಮರದ ದಿಮ್ಮಿಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ, ಸಮೀಪದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಸ್ಥಳಾಂತರಿಸಿದ್ದಾರೆ. ನಂತರ ಕಟ್ಟಿಗೆಯಲ್ಲಿ ಮೂಡಿದ ಗಣಪನಿಗೆ ಗ್ರಾಮದ ಹಿಂದೂ-ಮುಸ್ಲಿಮರು ಪೂಜೆ ಸಲ್ಲಿಸಿ ಸೌಹಾರ್ದ ಮೆರೆದಿದ್ದಾರೆ.

ADVERTISEMENT

‘ಕಟ್ಟಿಗೆಯ ದಿಮ್ಮಿಯಲ್ಲಿ ಗಣೇಶನ ತದ್ರೂಪ ಮೂಡಿ ಅಚ್ಚರಿಗೆ ಕಾರಣವಾಗಿದೆ. ಸ್ಥಳೀಯ ಸ್ವಾಮಿ ವಿವೇಕಾನಂದ ಯುವಕ ಸಂಘದವರು ಈ ಬಾರಿ ಗಣೇಶ ಚತುರ್ಥಿಗೆ ಈ ಮೂರ್ತಿಯನ್ನೇ ಪ್ರತಿಷ್ಠಾಪಿಸಲು ನಿರ್ಧರಿಸಿದ್ದಾರೆ. ಗಣೇಶ ಹಬ್ಬದ ಬಳಿಕ ಇದನ್ನು ಕರಿಬಸವೇಶ್ವರ ದೇವಸ್ಥಾನದಲ್ಲಿ ಇರಿಸಿ ಪೂಜಿಸಲು ತೀರ್ಮಾನಿಸಿದ್ದೇವೆ’ ಎಂದು ಗ್ರಾಮದ ವಿಶ್ವನಾಥಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.