ADVERTISEMENT

ಇಸ್ರೋದಿಂದ ವಿಶ್ವ ಅಂತರಿಕ್ಷ ಸಪ್ತಾಹ 6ರಿಂದ

ಬಿಐಟಿಎಂನಲ್ಲಿ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2018, 15:17 IST
Last Updated 5 ಅಕ್ಟೋಬರ್ 2018, 15:17 IST
ಬಳ್ಳಾರಿಯ ಬಿಐಟಿಎಂ ಕಾಲೇಜಿನಲ್ಲಿ ಶುಕ್ರವಾರ ವಿಶ್ವ ಅಂತರಿಕ್ಷ ಸಪ್ತಾಹದ ಸಿದ್ಧತೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್ ಸ್ವಯಂಸೇವಕರೊಂದಿಗೆ ಚರ್ಚಿಸಿದರು.
ಬಳ್ಳಾರಿಯ ಬಿಐಟಿಎಂ ಕಾಲೇಜಿನಲ್ಲಿ ಶುಕ್ರವಾರ ವಿಶ್ವ ಅಂತರಿಕ್ಷ ಸಪ್ತಾಹದ ಸಿದ್ಧತೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್ ಸ್ವಯಂಸೇವಕರೊಂದಿಗೆ ಚರ್ಚಿಸಿದರು.   

ಬಳ್ಳಾರಿ: ಕೇಂದ್ರ ಸರ್ಕಾರ, ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ, ಜಿಲ್ಲಾಡಳಿತ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಬಿಐಟಿಎಂ ಹಾಗೂ ಜೆಎಸ್‌ ಡಬ್ಲ್ಯು ಸಂಯುಕ್ತಾಶ್ರಯದಲ್ಲಿ ನಗರದ ಬಿಐಟಿಎಂ ಕಾಲೇಜಿನಲ್ಲಿ ಅ.6ರಿಂದ 10ರವರೆಗೆ ವಿಶ್ವ ಅಂತರಿಕ್ಷ ಸಪ್ತಾಹ ನಡೆಯಲಿದೆ.

ಅ.6ರಂದು ಬೆಳಿಗ್ಗೆ 10ಕ್ಕೆ ನಗರದ ವಿವಿಧ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ, 7ರಂದು ಬೆಳಿಗ್ಗೆ 8.30ಕ್ಕೆ ಕನಕದುರ್ಗಮ್ಮ ಗುಡಿಯ ಆವರಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಸ್ಪೇಸ್ ವಾಕಥಾನ್ ನಡೆಯಲಿದೆ.

8ರಂದು ಬೆಳಿಗ್ಗೆ 10.30ಕ್ಕೆ ವಿಶ್ವ ಅಂತರಿಕ್ಷ ಸಪ್ತಾಹ ಮತ್ತು ತಾಂತ್ರಿಕ ಸಮ್ಮೇಳನ ನಡೆಯಲಿದೆ. ಜೆಎಸ್‌ಡಬ್ಲ್ಯು ಉಪಾಧ್ಯಕ್ಷ ಸೂರ್ಯಪ್ರಕಾಶ, ಸತೀಶ ಧವನ್ ಬಾಹ್ಯಕಾಶ ಕೇಂದ್ರದ ಎಂ.ಎನ್.ಸತ್ಯನಾರಾಯಣ ಮತ್ತು ವಿ.ನಾಗರಾಜು ಪಾಲ್ಗೊಳ್ಳಲಿದ್ದಾರೆ.

ADVERTISEMENT

ಅ.8ರಿಂದ 10ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೆ ಬಾಹ್ಯಾಕಾಶ ಪ್ರದರ್ಶನ, ಮಾದರಿ ಪ್ರದರ್ಶನ, ಚಲನಚಿತ್ರ ಪ್ರದರ್ಶನಗಳು, ತಾರಾಲಯ ಪ್ರದರ್ಶನಗಳು, ಆಶು ಭಾಷಣ ಸ್ಪರ್ಧೆ ನಡೆಯಲಿದೆ.

ಪರಿಶೀಲನೆ: ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾದ್ ಮನೋಹರ್ ಸಪ್ತಾಹದ ಪೂರ್ವಸಿದ್ಧತೆ ಪರಿಶೀಲನೆ ನಡೆಸಿದರು. ‘ಬಾಹ್ಯಾಕಾಶ ಕ್ಷೇತ್ರ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೇ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ತಲುಪಲಿ ಎಂಬ ಉದ್ದೇಶದಿಂದ ಸಪ್ತಾಹವನ್ನು ಏರ್ಪಡಿಸಲಾಗಿದೆ’ ಎಂದರು.

‘ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಅವಕಾಶಗಳಿವೆ. ಯುವ ವಿಜ್ಞಾನಿಗಳಿಗೆ ಕೇಂದ್ರ ಸರಕಾರದ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹಧನ್ ಯೋಜನಾ ಅಡಿಯಲ್ಲಿ ನೀಡಲಾಗುವ ಮಾಸಿಕ ಫೆಲೋಷಿಪ್ ಅನ್ನು ಪಡೆಯಲು ಪದವಿ ಹಂತದ ಸಂಶೋಧನಾ ವಿದ್ಯಾರ್ಥಿಗಳು ಪ್ರಯತ್ನಿಸಬೇಕು’ ಎಂದರು.

‘ನಾನು ಕೂಡ ರಾಷ್ಟ್ರಮಟ್ಟದ ಈ ಫೆಲೋಶಿಪ್ ಪಡೆದಿದ್ದೆ,ಆದರೇ ವಿಜ್ಞಾನಿಯಾಗಿ ಮುಂದುವರಿಯದೇ ಭಾರತೀಯ ಆಡಳಿತ ಸೇವೆಗಾಗಿ ತೊಡಗಿಸಿಕೊಂಡೆ’ ಎಂದು ಸ್ಮರಿಸಿದರು.

ಬಿಐಟಿಎಂ ನಿರ್ದೇಶಕ ಯಶ್ವಂತ್ ಭೂಪಾಲ್, ಉಪನಿರ್ದೆಶಕ ವೈ.ಪೃಥ್ವಿರಾಜ್, ಇಸ್ರೋ ಪ್ರತಿನಿಧಿ ಮನೋಜ್ ಹಾಗೂ ರೆಡ್‌ ಕ್ರಾಸ್‌ ಸಂಸ್ಥೆಯ ಎಂ.ಎ.ಶಕೀಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.