ADVERTISEMENT

ಜಿಲ್ಲಾ ಪ್ರಜಾ ಪರಿವರ್ತನಾ ವೇದಿಕೆಯಿಂದ ಬಳ್ಳಾರಿಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 16:09 IST
Last Updated 24 ಫೆಬ್ರುವರಿ 2025, 16:09 IST
ಯಾದಗಿರಿಯ ಕೆರೆಯಲ್ಲಿ ಗುರುಮಠಕಲ್ ಪಟ್ಟಣದ ಬುಡ್ಗಾ ಜಂಗಮ ಸಮುದಾಯದ ಇಬ್ಬರು ಯುವತಿಯರ ಶವಗಳು ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪ್ರಜಾ ಪರಿವರ್ತನಾ ವೇದಿಕೆಯಿಂದ ಬಳ್ಳಾರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು
ಯಾದಗಿರಿಯ ಕೆರೆಯಲ್ಲಿ ಗುರುಮಠಕಲ್ ಪಟ್ಟಣದ ಬುಡ್ಗಾ ಜಂಗಮ ಸಮುದಾಯದ ಇಬ್ಬರು ಯುವತಿಯರ ಶವಗಳು ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪ್ರಜಾ ಪರಿವರ್ತನಾ ವೇದಿಕೆಯಿಂದ ಬಳ್ಳಾರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು   

ಬಳ್ಳಾರಿ: ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಕೆರೆಯಲ್ಲಿ ಬುಡ್ಗಾ ಜಂಗಮ ಸಮುದಾಯದ ಇಬ್ಬರು ಯುವತಿಯರ ಶವಗಳು ಪತ್ತೆಯಾದ ಘಟನೆಯ ಸೂಕ್ತ ತನಿಖೆಗೆ ಆಗ್ರಹಿಸಿ, ಯುವತಿಯರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಪ್ರಜಾ ಪರಿವರ್ತನಾ ವೇದಿಕೆಯು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು. 

‘ಪ್ರಕರಣವನ್ನು ಪೊಲೀಸರು ಆರಂಭಿಕ ಹಂತದಲ್ಲೇ ನಿರ್ಲಕ್ಷಿಸಿದ್ದಾರೆ’ ಎಂದು ಆರೋಪಿಸಿದ ಸಂಘಟನೆಯ ಮುಖಂಡರು ಘೋಷಣೆ ಕೂಗಿದರು. ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.   

ಸಂಘಟನೆ ಪ್ರಧಾನ ಕಾರ್ಯದರ್ಶಿ ವೈ. ಶಿವಕುಮಾರ್‌ ಮಾತನಾಡಿ, ‘ಫೆ. 12ರಂದು ಯಾದಗಿರಿಯ ಗುರುಮಠಕಲ್‌ನ ಇಂದಿರಾ ನಗರದಲ್ಲಿ ಅಲೆಮಾರಿ ಸಮುದಾಯದ ಇಬ್ಬರು ಹೆಣ್ಣುಮಕ್ಕಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಅವರ ಮೇಲೆ ಅತ್ಯಾಚಾರ ಮಾಡಿ ಕೊಲ್ಲಲಾಗಿತ್ತು. ಆದರೆ, ಪೊಲೀಸರು ಪ್ರಕರಣ ದಾಖಲಿಸುವಾಗ ನಿರ್ಲಕ್ಷ್ಯ ಮಾಡಿದ್ದಾರೆ. ’ನೀರು ಕುಡಿಯುವಾಗ ಪಿಟ್ಸ್‌ ಬಂದು ಸತ್ತಿದ್ದಾರೆ’ ಎಂದು ಪ್ರಕರಣ ದಾಖಲು ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ADVERTISEMENT

‘ಸಂಘಟನೆಗಳು ಪ್ರತಿಭಟನೆ ಮಾಡಿದ ಬಳಿಕ ಕೆಲ ಮಂದಿಯ ಮೇಲೆ ಅನುಮಾನವಿರುವುದಾಗಿ ಪೊಲೀಸರು ಈಗ ಹೇಳುತ್ತಿದ್ದಾರೆ. ಹಾಗಾದರೆ ಅಲ್ಲಿಯವರೆಗೆ ಪೊಲೀಸರು ಏನು ಮಾಡುತ್ತಿದ್ದರು? ಮೃತರು ಅಲೆಮಾರಿ ಸಮುದಾಯವಾದವರು ಎಂಬ ಕಾರಣಕ್ಕೆ ಇಂಥ ನಿರ್ಲಕ್ಷ್ಯ ಮಾಡಬಾರದು. ಆದ್ದರಿಂದಲೇ ನಾವು ಹೋರಾಟಕ್ಕಿಳಿದಿದ್ದೇವೆ’ ಎಂದರು.  

ಸಂಘದ ಉಪಾಧ್ಯಕ್ಷ ಹನುಮಂತ ಮಾತನಾಡಿ, ‘ಸರ್ಕಾರಕ್ಕೆ ಹೆಣ್ಣುಮಕ್ಕಳ ಮೇಲೆ ಕಾಳಜಿ ಇದ್ದರೆ ಈ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಬೇಕು. ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ಪೋಕ್ಸೊ ಅಡಿ ಪ್ರಕರಣ ದಾಖಲಿಸಿ ತಪ್ಪಿತಸ್ಥರನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.