ADVERTISEMENT

ಯತ್ನಾಳ ಗೊಂದಲ ಸೃಷ್ಟಿಸಬಾರದು: ಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ

ವಿಧಾನಪರಿಷತ್‌ ತಾಕೀತು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 8:29 IST
Last Updated 23 ಅಕ್ಟೋಬರ್ 2020, 8:29 IST
ಹೊಸಪೇಟೆಯಲ್ಲಿ ಶುಕ್ರವಾರ ವಿಧಾನ ಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ಹೊಸಪೇಟೆಯಲ್ಲಿ ಶುಕ್ರವಾರ ವಿಧಾನ ಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು   

ಹೊಸಪೇಟೆ: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಗೊಂದಲದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಮಾಧ್ಯಮಗಳಿಗೆ ಅನಗತ್ಯ ಹೇಳಿಕೆಗಳನ್ನು ಕೊಟ್ಟು ಗೊಂದಲ ಸೃಷ್ಟಿಸಬಾರದು’ ಎಂದು ವಿಧಾನ ಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ತಾಕೀತು ಮಾಡಿದರು.

‘ಕೋವಿಡ್‌, ನೆರೆ ಸಂದರ್ಭದಲ್ಲೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಯಶಸ್ವಿ ಮುಖ್ಯಮಂತ್ರಿ ಎಂದು ಕರೆಸಿಕೊಳ್ಳುತ್ತಿದ್ದಾರೆ. ಸಮಗ್ರ ಕರ್ನಾಟಕಕ್ಕೆ ದಕ್ಷ ಆಡಳಿತ ಕೊಡುತ್ತಿದ್ದಾರೆ. ಅವರೇ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಯತ್ನಾಳ ಅವರ ಬೇಡಿಕೆಗಳು ಏನೇ ಇರಬಹುದು. ಆದರೆ, ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿಸಬಾರದು. ನೆರೆ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಜನರ ಸಮಸ್ಯೆಗಳಿಗೆ ಸ್ಪಂದಿಸೋಣ’ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ವಿಧಾನ ಪರಿಷತ್‌ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್‌ ಜಿ. ನಮೋಶಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದೆ. ಒಂದುವೇಳೆ ಅವರು ಗೆದ್ದರೆ ಶಿಕ್ಷಕರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗುತ್ತದೆ’ ಎಂದರು.

ADVERTISEMENT

‘ಕೋವಿಡ್‌ ಸಂಕಷ್ಟದ ಪರಿಸ್ಥಿತಿಯಲ್ಲೂ ನಮ್ಮ ಸರ್ಕಾರ ಶಿಕ್ಷಕರ ವೇತನ ಸ್ಥಗಿತಗೊಳಿಸಿಲ್ಲ. ಪ್ರಚಾರಕ್ಕೆ ಹೋದ ಅನೇಕ ಕಡೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಅಲ್ಲಿನವರು ತಿಳಿಸಿದ್ದಾರೆ. ಚುನಾವಣೆ ಮುಗಿದ ಬಳಿಕ ಅವುಗಳನ್ನು ಪರಿಹರಿಸಲಾಗುವುದು. 2009ರಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ ನೂರಾರು ಖಾಸಗಿ ಶಾಲಾ, ಕಾಲೇಜುಗಳನ್ನು ಅನುದಾನದ ವ್ಯಾಪ್ತಿಗೆ ತರಲಾಗಿತ್ತು. ಏಳನೇ ವೇತನ ಆಯೋಗ ಜಾರಿಗೆ ಶಿಫಾರಸು ಮಾಡಲಾಗಿತ್ತು’ ಎಂದು ನೆನಪಿಸಿದರು.

ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ಬಿಜೆಪಿ ಮುಖಂಡರಾದ ವೀರಾಂಜನೇಯ, ಶಂಕರ್ ಮೇಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.