ADVERTISEMENT

ಬಂದ್‌ ಹತ್ತಿಕ್ಕಿ ವಿಫಲಗೊಳಿಸಿದ ಪೊಲೀಸರು

ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರ ವರ್ಗಾವಣೆ ಖಂಡಿಸಿ ವಿವಿಧ ಸಂಘಟನೆಗಳಿಂದ ಜಿಲ್ಲಾ ಕೇಂದ್ರ ಬಂದ್‌ಗೆ ಕರೆ, ಪ್ರತಿಭಟನಾಕಾರರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 19:45 IST
Last Updated 16 ಆಗಸ್ಟ್ 2019, 19:45 IST
ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು
ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು   

ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರ ವರ್ಗಾವಣೆ ಖಂಡಿಸಿ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಜಿಲ್ಲಾ ಕೇಂದ್ರ ಬಂದ್‌ ಪ್ರತಿಭಟನಾಕಾರರ ಬಂಧನದಿಂದಾಗಿ ನಿರಸಗೊಂಡಿತು. ‘ರಾಜಕಾರಣಿಗಳ ಕುಮ್ಮಕ್ಕಿನಿಂದ ಪೊಲೀಸರು ಬಂದ್‌ ವಿಫಲಗೊಳಿಸಿದರು’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ನಗರದಲ್ಲಿ ಬೆಳಿಗ್ಗೆ 5.30ರ ಸುಮಾರಿಗೆ ರೈತ ಸಂಘ ಹಾಗೂ ಹಸಿರುಸೇನೆ, ಜಿಲ್ಲಾ ರೇಷ್ಮೆ ಹಿತರಕ್ಷಣಾ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಯುವಸೇನೆ ಪದಾಧಿಕಾರಿಗಳು ಬಿ.ಬಿ.ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಿದರು. ಶಿಡ್ಲಘಟ್ಟ ವೃತ್ತದಲ್ಲಿ ವಾಹನಗಳನ್ನು ತಡೆಯಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸ್‌ ಅಧಿಕಾರಿಗಳು 6.30ರ ಸುಮಾರಿಗೆ ಬಂಧಿಸಿ ಬಂದ್ ಹತ್ತಿಕ್ಕಿದರು.

ಹೀಗಾಗಿ, ನಗರದ ನಾಗರಿಕರಿಗೆ ಬಂದ್‌ ನಡೆದಿರುವುದು ಅರಿವಿಗೆ ಬರದಂತಾಯಿತು. ಹೊತ್ತು ಏರುತ್ತಿದ್ದಂತೆ ನಗರದ ಜನಜೀವನ ಎಂದಿನಂತೆ ಕಂಡುಬಂತು. ಬಂದ್‌ ಕಾರಣಕ್ಕೆ ಬೆಳಿಗ್ಗೆ ಬಾಗಿಲು ತೆಗೆಯಲು ಹಿಂದೇಟು ಹಾಕಿದ್ದ ಹೊಟೇಲ್‌ಗಳ ಮಾಲೀಕರು ಬೆಳಿಗ್ಗೆ 9 ಗಂಟೆಯ ನಂತರ ತಮ್ಮ ವಹಿವಾಟು ಆರಂಭಿಸಿದರು. ವಾಹನಗಳ ಸಂಚಾರ ಕೂಡ ಸಹಜವಾಗಿತ್ತು.

ADVERTISEMENT

ಬಂಧನಕ್ಕೆ ಒಳಗಾದ ಪ್ರತಿಭಟನಾಕಾರರ ಬೇಡಿಕೆಯಂತೆ ಅವರನ್ನು ಭೇಟಿ ಮಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್‌ ಅವರು ಬಂದ್ ವಿಚಾರವನ್ನು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾದೇವಿ ಅವರ ಗಮನಕ್ಕೆ ತಂದರು. ಬಳಿಕ ಪ್ರತಿಭಟನಾಕಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ನಾಗಾಂಬಿಕಾದೇವಿ ಅವರು ಮನವಿ ಪತ್ರ ಕೊಟ್ಟರೆ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಅವರಿಗೆ ಜಿಲ್ಲಾಡಳಿತದ ಮೂಲಕ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ‘ಒಂದೆಡೆ ಅತಿವೃಷ್ಟಿಯಿಂದ ರಾಜ್ಯ ನಲುಗುತ್ತಿದ್ದರೆ. ನಮ್ಮಲ್ಲಿ ಅನಾವೃಷ್ಟಿ ತಲೆದೋರಿದೆ. ಈ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಜಿಲ್ಲೆಯ ಅಂತರ್ಜಲ ಅಭಿವೃದ್ಧಿಗೆ ಜನರ ಸಹಭಾಗಿತ್ವದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರನ್ನು ವರ್ಗಾವಣೆ ಮಾಡಿರುವುದು ಖಂಡನೀಯ’ ಎಂದು ಹೇಳಿದರು.

‘ದುಷ್ಟ ರಾಜಕಾರಣಿಗಳಿಂದಾಗಿ ನಾವು ಈಗಾಗಲೇ ಬೀದಿಗೆ ಬಂದಿದ್ದೇವೆ. ರಾಜಕಾರಣಿಗಳ ಷಡ್ಯಂತ್ರದಿಂದ ದಕ್ಷ ಅಧಿಕಾರಿಗಳು ವರ್ಗವಾಗುತ್ತಿರುವುದು ಕಳವಳದ ವಿಚಾರ. ಪ್ರಾಮಾಣಿಕ ಅಧಿಕಾರಿ ಬೆಂಬಲಿಸಿ ಬಂದ್‌ ನಡೆಸಿದರೆ ಕೆಲವರು ರಾಜಕೀಯ ಅಸ್ತ್ರ ಬಳಸಿ ನಮ್ಮ ಹೋರಾಟ ಮೊಟಕುಗೊಳಿಸಿರುವುದು ಖಂಡನೀಯ. ಇದೇ ರೀತಿ ಮುಂದುವರಿದರೆ ಎಲ್ಲಾ ಪೊಲೀಸ್ ಠಾಣೆಗಳ ಎದುರು ಪ್ರತಿಭಟನೆ ನಡೆಸುತ್ತೇವೆ’ ಎಂದು ತಿಳಿಸಿದರು.

ರೇಷ್ಮೆ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಯಲುವಹಳ್ಳಿ ಸೊಣ್ಣೆಗೌಡ ಮಾತನಾಡಿ, ‘ಜಿಲ್ಲೆಯಲ್ಲಿ ಸುಮಾರು 20 ವರ್ಷಗಳಿಂದ ನೀರಾವರಿ, ರೇಷ್ಮೆ ಸೇರಿದಂತೆ ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ಹೋರಾಟ, ಬಂದ್ ಮಾಡುತ್ತ ಬಂದಿದ್ದೇವೆ. ಆದರೆ ರಾಜಕೀಯ ಕೈವಾಡದಿಂದ ಈ ಬಂದ್ ಅನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿ ಈ ರೀತಿ ನಡೆದಿದೆ. ಜನರು ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಹೇಳಿದರು.

ರೈತ ಸಂಘದ ಮಹಿಳಾ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷೆ ಉಮಾ, ಪದಾಧಿಕಾರಿಗಳಾದ ಕೃಷ್ಣಪ್ಪ, ಮಂಡಿಕಲ್ಲ ವೇಣು, ಕುಪ್ಪಹಳ್ಳಿ ಶ್ರೀನಿವಾಸ್, ಮುನಿನಂಜಪ್ಪ, ರಮೇಶ್‌, ರವಿ, ರಾಮನಾಥ್‌, ಲಕ್ಷ್ಮಣರೆಡ್ಡಿ, ಕರ್ನಾಟಕ ರಕ್ಷಣಾ ವೇದಿಕೆಯ ಯುವಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀರಾಮೆಗೌಡ, ಜಿಲ್ಲಾ ರೇಷ್ಮೆ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳಾದ ಮುನಿರಾಜು, ನಾರಾಯಣಸ್ವಾಮಿ, ಮೋಹನ್ ಕುಮಾರ್, ರವಿಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.