ADVERTISEMENT

ಅಕ್ರಮ ಅಕ್ಕಿ ದಾಸ್ತಾನು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2013, 8:55 IST
Last Updated 30 ಸೆಪ್ಟೆಂಬರ್ 2013, 8:55 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಮೆಣಸಿಯಲ್ಲಿ ಅಕ್ರಮ ದಾಸ್ತಾನು ಮಾಡಿರುವ ಅಕ್ಕಿ.
ದೊಡ್ಡಬಳ್ಳಾಪುರ ತಾಲ್ಲೂಕಿನ ಮೆಣಸಿಯಲ್ಲಿ ಅಕ್ರಮ ದಾಸ್ತಾನು ಮಾಡಿರುವ ಅಕ್ಕಿ.   

ದೊಡ್ಡಬಳ್ಳಾಪುರ:  ತಾಲ್ಲೂಕಿನ ಕೊಡಿ ಗೆಹಳ್ಳಿ ವಿ.ಎಸ್.ಎಸ್.ಎನ್ ವ್ಯಾಪ್ತಿಯ  ಮೆಣಸಿ ಕಾಲೋನಿ ಗ್ರಾಮದ ಫ್ಲೋರ್ ಮಿಲ್‌ ಒಂದರಲ್ಲಿ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಗ್ರಾಮಾಂತರ ಪೋಲಿಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಪಡಿತರದಾರರಿಗೆ ವಿತರಿಸಬೇಕಾದ ಈ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ವಿ.ಎಸ್.ಎಸ್.ಎನ್ ಕಾರ್ಯದರ್ಶಿ ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೇದಾರ ಎಂ.ಡಿ.ಚಂದ್ರಶೇಖರ್ ತಂಡ ಮತ್ತು ಪೋಲೀಸರು ದಾಳಿ ಮಾಡಿದರು.

ಈ ಸಮಯದಲ್ಲಿ ಸುಮಾರು ೩೦ ಚೀಲ ಅಕ್ಕಿ ಮೂಟೆಗಳು ಅಕ್ರಮವಾಗಿ ದಾಸ್ತಾನು ಮಾಡಿದ್ದು ಪತ್ತೆಯಾಗಿದೆ. ಫ್ಲೋರ್‌ಮಿಲ್ಲ್‌ನಲ್ಲಿನ ಅಕ್ಕಿಯನ್ನು ಅಕ್ರಮ ದಾಸ್ತಾನು ಮಾಡಲಾಗಿದೆ ಎಂದು ಅಧಿಕಾರಿಗಳು ದೃಢಿೀಕರಿಸಿದ್ದಾರೆ. ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡಿದ ನಂತರ ಕಾರ್ಯದರ್ಶಿ ವಿಶ್ವೇಶ್ವರಯ್ಯ ಅವರ ವಿರುದ್ಧ ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸುವುದಾಗಿ ಶಿರಸ್ತೇದಾರ ಎಂ.ಡಿ.ಚಂದ್ರಶೇಖರ್ ತಿಳಿಸಿದ್ದಾರೆ.

ಮೆಣಸಿ, ಮೆಣಸಿ ಕಾಲೋನಿ ಮತ್ತು ಅಣಗಲಪುರ ಗ್ರಾಮಗಳಲ್ಲಿ ಹಲವಾರು ಪಡಿತರ ಚೀಟಿದಾರರಿಗೆ ನಿಮ್ಮ ಹೆಸರೇ ನಮೂದಾಗಿಲ್ಲ ಎಂದು ಹೇಳಿ ವಂಚನೆ ಮಾಡಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿಗಳು ನೀಡಿರುವ ಪಟ್ಟಿಯಲ್ಲಿ ಪಡಿತರ ಚೀಟಿ ಸಂಖ್ಯೆ ನಮೂದಾಗಿಲ್ಲ ಎಂಬ ಸಮೂಬು ಹೇಳಲಾಗಿದೆ. ಈ ಮೂಲಕ  ಸುಮಾರು ೩೦ ಮೂಟೆ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ  ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

‘ಪರಿಷ್ಕೃತ ಪಡಿತರ ಚೀಟಿಗಳ ಪಟ್ಟಿಯನ್ನು ಇಲ್ಲಿಯವರೆಗೂ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳಲ್ಲಿ ನೀಡದೆ ಇರುವುದು ಉದ್ದೇಶ ಪೂರ್ವಕವಾಗಿದೆ ಎನ್ನಲು ಇಲ್ಲಿ ಅಕ್ರಮವಾಗಿ ದಾಸ್ತಾನು ಘಟನೆ ಸಾಕ್ಷಿಯಾಗಿದೆ. ಹೀಗಾಗಿ ಮುಂದಿನ ವಿ.ಎಸ್.ಎಸ್.ಎನ್ ಸಭೆಯಲ್ಲಿ ಈ ಕುರಿತು ಚರ್ಚಿಸಿ ಕಾರ್ಯದರ್ಶಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವಿ.ಎಸ್.ಎಸ್.ಎನ್ ನಿರ್ದೇಶಕ ಅಶ್ವತ್ಥಪ್ಪ’ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.