ADVERTISEMENT

ಅಖಿಲ ಭಾರತ ಸಭೆ ದೆಹಲಿಯತ್ತ ರೇಷ್ಮೆ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 19:05 IST
Last Updated 3 ಮಾರ್ಚ್ 2012, 19:05 IST

ವಿಜಯಪುರ: ಸುಂಕ ರಹಿತ ರೇಷ್ಮೆ ಆಮದು ವಿರೋಧಿ ಅಖಿಲ ಭಾರತ ಹೋರಾಟ ಸಮಿತಿ ಆಶ್ರಯದಲ್ಲಿ ನವದೆಹಲಿಯಲ್ಲಿ  ಇದೇ 5ರಂದು ಬೆಳಿಗ್ಗೆ 11ಗಂಟೆಗೆ ನಡೆಯುವ ರೇಷ್ಮೆ ಬೆಳೆಗಾರರ ಅಖಿಲ ಭಾರತ ಸಭೆಯಲ್ಲಿ ಪಾಲ್ಗೊಳ್ಳಲು ಗ್ರಾಮಾಂತರ ಜಿಲ್ಲೆಯ 35 ಮಂದಿ ರೇಷ್ಮೆ ಬೆಳೆಗಾರರು ಶನಿವಾರ ಪ್ರಯಾಣ ಬೆಳೆಸಿದರು.

ಜಿಲ್ಲಾ ಸಂಚಾಲಕ ಜಿ.ಎಂ. ಕಲ್ಯಾಣ್‌ಕುಮಾರ್ ನೇತೃತ್ವದಲ್ಲಿ ರೈತರು ಚೆನ್ನೈ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದಾರೆ. ಹೊಸಕೋಟೆಯಿಂದ 10, ದೊಡ್ಡಬಳ್ಳಾಪುರದಿಂದ 6, ದೇವನಹಳ್ಳಿಯಿಂದ 19, ಆಂಧ್ರಪ್ರದೇಶ 25, ಪಶ್ಚಿಮ ಬಂಗಾಳದ 10, ತಮಿಳುನಾಡಿನ 10, ಜಮ್ಮು ಮತ್ತು ಕಾಶ್ಮೀರ, ಕೇರಳ, ಮಹಾರಾಷ್ಟ್ರದಿಂದ ತಲಾ 5 ಮಂದಿ ರೈತ ಪ್ರತಿನಿಧಿಗಳು ಭಾಗವಹಿಸುವರು.

 ಕರ್ನಾಟಕದ ಇತರೆ ಜಿಲ್ಲೆಗಳಿಂದ 125 ಮಂದಿ ಪಾಲ್ಗೊಳ್ಳಲಿದ್ದಾರೆ.5ರಂದು ಅಖಿಲ ಭಾರತ ಸಭೆಯ ನಂತರ 6ರಂದು ಹೋರಾಟ ಸಮಿತಿಯ ಮುಖಂಡರು ಪ್ರಧಾನಿ ಮತ್ತು ಕೇಂದ್ರ ಅರ್ಥ ಹಾಗೂ ಜವಳಿ ಸಚಿವರನ್ನು ಭೇಟಿ ಮಾಡಿ ಈ ಬಾರಿಯ ಕೇಂದ್ರ ಆಯ ವ್ಯಯದಲ್ಲಿ ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇ 5 ರಿಂದ ಶೇ 31ಕ್ಕೆ ಏರಿಸಬೇಕು ಹಾಗೂ ಸಂಕಷ್ಟದಲ್ಲಿರುವ ರೇಷ್ಮೆ ಬೆಳೆಗಾರರಿಗೆ 2 ಸಾವಿರ ಕೋಟಿ ರೂಪಾಯಿ ವಿಶೇಷ ಪ್ಯಾಕೆಜ್ ನೀಡುವಂತೆ ಒತ್ತಾಯಿಸಲಾಗುವುದು ಎಂದು ಜಿಲ್ಲಾ ಸಂಚಾಲಕ ಜಿ.ಎಂ. ಕಲ್ಯಾಣ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತ ಮುಖಂಡರ ನಿಯೋಗದಲ್ಲಿ ಹೊಸಕೋಟೆ ತಾಲ್ಲೂಕು ಘಟಕದ ಸಂಚಾಲಕ ಹುಣಸೇನಹಳ್ಳಿ ಕೃಷ್ಣಪ್ಪ, ದೇವನಹಳ್ಳಿ ತಾಲ್ಲೂಕು ಘಟಕದ ಸಂಚಾಲಕ ಚನ್ನರಾಯಪಟ್ಟಣ ಜನಾರ್ದನ್, ದೊಡ್ಡಬಳ್ಳಾಪುರ ಘಟಕದ ಸಂಚಾಲಕ ಲಿಂಗನಹಳ್ಳಿ ರಾಜೇಶ್ ರೈತರೊಂದಿಗೆ ಪಯಣ ಬೆಳೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.