ADVERTISEMENT

ಅಧಿಕಾರಿಗಳ ಮಾತು ನಂಬಿ ಕೆಟ್ಟರು!

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 10:00 IST
Last Updated 21 ಸೆಪ್ಟೆಂಬರ್ 2013, 10:00 IST

ದೊಡ್ಡಬಳ್ಳಾಪುರ: ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಮಾತು ನಂಬಿ ಸಾಲ ಮಾಡಿ ಮನೆ ಕಟ್ಟಿದ 72 ಬಡ ಕುಟುಂಬಗಳು ಈಗ ಬೀದಿಗೆ ಬಿದ್ದಿರುವ ಪ್ರಸಂಗ ತಾಲ್ಲೂಕಿನ ತಿಪ್ಪೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.

2010–11ನೇ ಸಾಲಿನಲ್ಲಿ ರಾಜೀವ್‌ ಗಾಂಧಿ ಗ್ರಾಮಿಣ ವಸತಿ ನಿಗಮದಿಂದ ಮನೆ ನಿರ್ಮಾಣಕ್ಕೆ ಮೂರು ಹಂತಗಳಲ್ಲಿ ಪ್ರತಿ ಮನೆ ನಿರ್ಮಾಣಕ್ಕೆ 75 ಸಾವಿರ ರೂಪಾಯಿ ನೀಡುವುದಾಗಿ ಪಂಚಾಯ್ತಿ ವತಿಯಿಂದ ಅಗತ್ಯ ಇದ್ದ ಎಲ್ಲಾ ದಾಖಲಾತಿ ಗಳನ್ನು ಅರ್ಹ ಫಲಾನುಭವಿಗಳಿಂದ ಪಡೆಯ ಲಾಗಿತ್ತು.

ಫಲಾನುಭವಿಗಳು ತಳಪಾಯ ಕಟ್ಟಿದ ನಂತರ ಮೊದಲ ಕಂತಿನ ಹಣ ಪಾವತಿ ಮಾಡಲಾಗುವುದು ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹೇಳಿದ್ದರು. ಅದರಂತೆ ಬಹುತೇಕ ಜನ ಫಲಾ ನುಭವಿಗಳು ಮಾಡಿ, ಪಂಚಾಯಿತಿ ಕಚೇರಿಗೆ ಬಾಗಿಲಿಗೆ ಹತ್ತಾರು ಬಾರಿ ತಿರುಗಾಡಿದ ನಂತರ ಎರಡನೇ ಹಂತ ದಲ್ಲಿನ ಗೋಡೆ ನಿರ್ಮಾಣ ಮಾಡಿದರೆ ಎರಡು ಕಂತುಗಳ ಹಣವನ್ನು ಒಂದೇ ಬಾರಿ ಪಾವತಿ ಮಾಡುವುದಾಗಿ ಹೇಳಿ ದ್ದರು.

ಗೋಡೆ ನಿರ್ಮಾಣವಾದ ನಂತರ ಮೂರು ಕಂತಿನ ಹಣವನ್ನು ಒಟ್ಟಿಗೆ ಪಾವತಿ ಮಾಡುತ್ತೇವೆ ಎಂದು ಹೇಳಿದ ವರು ಈಗ ನೋಡಿದರೆ  ನಿಗಮದಿಂದ ಅನುಮೋದನೆಯೇ ಆಗಿಲ್ಲ ಹಣ ನೀಡಲು ಸಾಧ್ಯ ಇಲ್ಲ ಎನ್ನುತ್ತಿದ್ದಾರೆ. ಪಂಚಾಯ್ತಿವರ ಮಾತು ನಂಬಿ ಸಾಲ ಮಾಡಿ ಮನೆ ಕಟ್ಟಿ ಕಷ್ಟಕ್ಕೆ ಸಿಲುಕು ವಂತಾಗಿದೆ.

ಕೂಲಿ ಮಾಡಿಕೊಂಡು ಗುಡಿಸಲು ಮನೆಯಲ್ಲಿ ಇದ್ದಾಗ ಸಾಲ ಗಾರರ ಕಾಟ ಇಲ್ಲದೆ ನೆಮ್ಮದಿಯಾಗಿದ್ದೆವು. ಪಂಚಾಯ್ತಿ ಅಧಿಕಾರಿಗಳ ಮಾತು ನಂಬಿ ಈಗ ಕಷ್ಟ ಪಡುವಂತಾಗಿದೆ ಎಂದು ಮಜರಹೊಸಹಳ್ಳಿ ತಾಂಡದ ಜಯಮ್ಮಬಾಯಿ ತಮ್ಮ  ಆಳಲು ತೋಡಿಕೊಂಡರು.

ತಿಪ್ಪೂರು ಗ್ರಾ.ಪಂ. ವ್ಯಾಪ್ತಿಯಲ್ಲಿಯೇ ಅತಿ ಹೆಚ್ಚು ಲಂಬಾಣಿ ತಾಂಡಾಗಳು ಇರುವುದು ಹಾಗೂ ಮನೆಗಳು ಇಲ್ಲದೆ ಇರುವ ಕುಟುಂಬಗಳು ಇರುವುದು. ಇಂತಹ ಪ್ರದೇಶ ದಲ್ಲಿನ ಪಂಚಾಯ್ತಿ ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳ ಬೇಜ ವಾಬ್ದಾರಿತನದಿಂದ ನೂರಾರು ಬಡ ಕುಟುಂಬಗಳ ಸೂರಿನ ಕನಸು ಭಗ್ನಗೊಂಡಿದ್ದು ಕೂಲಿ ಮಾಡಿ ಬದುಕುತ್ತಿದ್ದವರು ಈಗ ಸಾಲ ಗಾರರಿಗೆ ಹೆದರಿ ಊರು ಬಿಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.