ADVERTISEMENT

ಅಪೌಷ್ಟಿಕತೆ ದೂರ ಮಾಡುವ ಮಹತ್ವಾಕಾಂಕ್ಷೆ

ಕ್ಷೀರಭಾಗ್ಯಕ್ಕೆ ಜಿಲ್ಲೆಯ ಎಲ್ಲೆಡೆ ಚಾಲನೆ ್ಞ ನಿಗಾ ವಹಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 11:47 IST
Last Updated 2 ಆಗಸ್ಟ್ 2013, 11:47 IST

ದೊಡ್ಡಬಳ್ಳಾಪುರ: `ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಸೂಕ್ತ ನಿಗಾ ವಹಿಸುವ ಮೂಲಕ ಕ್ಷೀರಭಾಗ್ಯ ಯೋಜನೆಯ ಯಶಸ್ಸಿಗೆ ಸಹಕರಿಸಬೇಕು' ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಗುರುವಾರ ತಾಲ್ಲೂಕಿನ ದೊಡ್ಡಬೆಳವಂಗಲ ಸರ್ಕಾರಿ ಹಿರಿಯ ಮಾದರಿ ಪಾಠಶಾಲೆಯಲ್ಲಿ ನಡೆದ ಕ್ಷೀರಭಾಗ್ಯ ಯೋಜನೆಯ ಉದ್ಘಾಟನಾ ಕಾರ್ಯಕ್ರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಇಂದಿಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಇದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ವೇದಾಂತ ಫೌಂಡೇಷನ್ ವತಿಯಿಂದ ವಿವಿಧ ಪೌಷ್ಟಿಕಾಂಶಯುಕ್ತ ಆಹಾರ ವಿತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಮಧ್ಯಾಹ್ನದ ವೇಳೆ ಬಿಸಿ ಊಟ ಯೋಜನೆ ಜಾರಿಗೆ ಬಂದ ನಂತರ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಾಗಿದೆ. ಅಲ್ಲದೆ ಮಕ್ಕಳ ದೈಹಿಕ ಬೆಳೆವಣಿಗೆ ಉತ್ತಮವಾಗಿರುವ ವರದಿಗಳು ಬಂದಿವೆ. ಈ ಎಲ್ಲ ವರದಿಗಳ ಆಧಾರದ ಮೇಲೆಯೇ ಈಗ ವಾರದಲ್ಲಿ ಮೂರು ದಿನಗಳ ಕಾಲ ಹಾಲು ವಿತರಣೆ ಯೋಜನೆ ಜಾರಿಗೆ ತರಲಾಗಿದೆ' ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಹಾಗೂ ಒಕ್ಕೂಟದ ನಿರ್ದೇಶಕ ಎನ್.ಹನುಮಂತೇಗೌಡ ಮಾತನಾಡಿ, `ಶಾಲೆಗಳಲ್ಲಿ ಹಾಲು ವಿತರಣೆಯಿಂದ ಹಾಲಿಗೆ ಉತ್ತಮ ಬೇಡಿಕೆ ಬರಲಿದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಜಾರಿಯ ನಂತರ ಖಾಸಗಿ ಶಾಲೆಗಳಲ್ಲೂ ಬಡವರ ಮಕ್ಕಳು ಓದುತ್ತಿದ್ದಾರೆ. ಹೀಗಾಗಿ ಖಾಸಗಿ ಶಾಲೆಗಳಲ್ಲಿನ ಮಕ್ಕಳಿಗು ಹಾಲು ನೀಡುವ ಯೋಜನೆ ಜಾರಿಯಾಗಬೇಕು' ಎಂದು ಹೇಳಿದರು.

ಸಮಾರಂಭದಲ್ಲಿ ಮಾತನಾಡಿದ, ಕಾಂಗ್ರೆಸ್ ನಗರ ಬ್ಲಾಕ್ ಸಮಿತಿ ಅಧ್ಯಕ್ಷ ತಿ.ರಂಗರಾಜು ಮಾತನಾಡಿ, ತಾಲ್ಲೂಕಿನ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ದೃಷ್ಠಿಯಿಂದ ಆ.3 ಮತ್ತು 4 ರಂದು ಚಿಕ್ಕಬಳ್ಳಾಪುರ ದಲ್ಲಿ ಬೃಹತ್ ಉದ್ಯೋಗ ಮೇಳೆ ನಡೆಸಲಾಗುತ್ತಿದೆ. ಉದ್ಯೋಗ ಮೇಳದಲ್ಲಿ ಸುಮಾರು 20 ಕಂಪೆನಿಗಳು ಭಾಗವಹಿಸಲಿವೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್ ವಹಿಸಿದ್ದರು. ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ನಾಗರಾಜ್, ತಾ.ಪಂ.ಸದಸ್ಯೆ ನರಸಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ತಿಮ್ಮೇಗೌಡ, ಸಮನ್ವಯ ಅಧಿಕಾರಿ ಬೈಯ್ಯಪ್ಪರೆಡ್ಡಿ, ಸಿಡಿಪಿಒ ಜಯದೇವಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಸಿದ್ದಗಂಗಯ್ಯ, ಕಾರ್ಯದರ್ಶಿ ಕೆ.ಮಲ್ಲಿಕಾರ್ಜುನರೆಡ್ಡಿ, ಹಾದ್ರಿಪುರ ಗ್ರಾ.ಪಂ.ಅಧ್ಯಕ್ಷ ರವಿಂದ್ರಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ರವಿಕುಮಾರ್, ಕಾಂಗ್ರೆಸ್ ಮುಖಂಡರಾದ ಎಸ್.ಎ.ರಾಜ್‌ಕುಮಾರ್, ಶಾಲೆಯ ಮುಖ್ಯಶಿಕ್ಷಕ ಬಿ.ಟಿ.ತಿಮ್ಮಯ್ಯ ಮತ್ತಿತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಇನ್ಸ್‌ಸ್ಪೈರ್ ಅವಾರ್ಡ್ ವಸ್ತು ಪ್ರದರ್ಶನದಲ್ಲಿ ಸೋಲಾರ್ ಮಾದರಿ ತಯಾರಿಕೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ದೊಡ್ಡಹೆಜ್ಜಾಜಿ ಶಾಲೆಯ ವಿದ್ಯಾರ್ಥಿನಿ ಕೆ.ಚಂದನಾ, ಮಾರ್ಗದರ್ಶನ ಮಾಡಿದ್ದ ಶಿಕ್ಷಕಿ ಜನತಾಕುಮಾರಿ ಅವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. 

`ಅಪೌಷ್ಟಿಕತೆ ನೀಗಿಸಲು ಹಾಲು ಸಹಕಾರಿ'
ದೇವನಹಳ್ಳಿ:
`ಮಕ್ಕಳಲ್ಲಿ ಅಪೌಷ್ಟಿಕತೆ ನೀಗಿಸಲು ಕ್ಷೀರಭಾಗ್ಯ ಅತ್ಯುತ್ತಮ ಯೋಜನೆ' ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.
ತಾಲ್ಲೂಕಿನ ವಿಶ್ವನಾಥಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, `ಪ್ರಾಥಮಿಕ ಶಿಕ್ಷಣದ ಪ್ರಗತಿ ಮಕ್ಕಳ ಭವಿಷ್ಯಕ್ಕೆ ಭದ್ರಬುನಾದಿ. ಎಲ್ಲ ಮಕ್ಕಳಿಗೂ ಆಹಾರ, ಬಟ್ಟೆ, ಶಿಕ್ಷಣ ಪ್ರಮುಖವಾಗಬೇಕು' ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಮುನಿರಾಜು ಮಾತನಾಡಿ, `ತಾಲ್ಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಮಾಧ್ಯಮಿಕ 212, ಪ್ರೌಢಶಾಲೆ 17, ಅನುದಾನಿತ 8 ಸೇರಿದಂತೆ ಒಟ್ಟು 16 ಸಾವಿರ ವಿದ್ಯಾರ್ಥಿಗಳು ಮತ್ತು 8500 ಅಂಗನವಾಡಿ ಮಕ್ಕಳಿಗೆ ಸರ್ಕಾರದ ಈ ಯೋಜನೆ ಲಭ್ಯವಾಗಲಿದೆ' ಎಂದರು.

ಬಮುಲ್ ನಿರ್ದೇಶಕ ಎ.ಸೋಮಣ್ಣ ಮಾತನಾಡಿ, `ಕ್ಷೀರಭಾಗ್ಯ ಯೋಜನೆಯಿಂದ ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಯ ಜೊತೆಗೆ ಹಾಲು ಉತ್ಪಾದಕರಿಗೆ ಹೆಚ್ಚು ಲಾಭವಾಗಲಿದೆ' ಎಂದರು.

`ಒಕ್ಕೂಟದಲ್ಲಿ ಹಾಲು ಮತ್ತು ಹಾಲಿನ ಪುಡಿ ಉತ್ಪಾದನೆ ಮಾಡಲಾಗುತ್ತಿದ್ದರೂ ಮಾರುಕಟ್ಟೆಯ ಸ್ಪರ್ಧೆಯಿಂದ 30 ರಿಂದ 40 ಕೋಟಿ ನಷ್ಟದಲ್ಲಿತ್ತು. ಈ ಯೋಜನೆಯಿಂದ ಒಕ್ಕೂಟ ಇನ್ನಷ್ಟು ಪ್ರಗತಿ ಕಾಣಲಿದೆ' ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರಾಧಿಕಾ, ಉಪಾಧ್ಯಕ್ಷ ಪಟಾಲಪ್ಪ, ಜೆ.ಡಿ.ಎಸ್ ಅಧ್ಯಕ್ಷ ಮುನಿಶ್ಯಾಮೇಗೌಡ, ತಹಶೀಲ್ದಾರ್ ಡಾ.ಎನ್.ಸಿ.ವೆಂಕಟರಾಜು, ತಾ.ಪಂ ಸದಸ್ಯ ವಿಜಯಕುಮಾರ್, ಗ್ರಾ.ಪಂ ಅಧ್ಯಕ್ಷೆ ಅಮರಾವತಿ, ಸಿ.ಡಿ.ಪಿ.ಒ ಅಶ್ವತ್ಥಮ್ಮ, ಕೆ.ಎಂ.ಎಫ್ ವಿಸ್ತರಣಾಧಿಕಾರಿ, ಗಂಗಣ್ಣ, ಉಪ ವ್ಯವಸ್ಥಾಪಕ, ಡಾ.ಶಿವಾಜಿನಾಯ್ಕ, ಕ್ಷೇತ್ರ ಸಮನ್ವಯಾಧಿಕಾರಿ ಹೊನ್ನಪ್ಪ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ರವಿಪ್ರಕಾಶ್, ಎಂ.ಪಿ.ಸಿ.ಎಸ್ ಅಧ್ಯಕ್ಷ ಶಿವರಾಮಯ್ಯ, ತಾಲ್ಲೂಕು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಧು,

ಡಿ.ಸಿ.ಪಿ ಬ್ಯಾಂಕ್ ನಿರ್ದೇಶಕ, ಸಂಪಂಗಿ ಗೌಡ, ಕುಂದಾಣ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಅಪ್ಪಣ್ಣ, ತಾಲ್ಲೂಕು ಹಿಂದುಳಿದ ವರ್ಗಗಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೋದಂಡರಾಮಯ್ಯ, ಖಾದಿ ಬೋರ್ಡ್ ಮಾಜಿ ಅಧ್ಯಕ್ಷ ರವಿಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್ ಇದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಬಮುಲ್ ಒಕ್ಕೂಟ ಹಾಗೂ ತಾಲ್ಲೂಕು ಶಿಶು ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

`ಆರೋಗ್ಯ ಮುಖ್ಯ'
ವಿಜಯಪುರ:
ಕ್ಷೀರಭಾಗ್ಯ ಯೋಜನೆ ಮಕ್ಕಳ ಆರೋಗ್ಯಾಭಿವೃದ್ಧಿಗೆ ಪೂರಕವಾಗಿದೆ ಎಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಆರ್.ಬಚ್ಚೇಗೌಡ ತಿಳಿಸಿದರು.

ಪಟ್ಟಣದ ಸರ್ಕಾರಿ ಪಿ.ಯು ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಕ್ಕಳಿಗೆ ಹಾಲನ್ನು ಹಂಚುವ ಮೂಲಕ ಕ್ಷೀರ ಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಆರೋಗ್ಯವೂ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ಮಕ್ಕಳ ಸರ್ವಾಂಗೀಣ ಬೆಳವಣಿಗೆ ದೃಷ್ಟಿಯಲ್ಲಿಟ್ಟುಕೊಂಡು ಈ ಸೌಲಭ್ಯ ಕಲ್ಪಿಸಿದೆ' ಎಂದರು.

ಪುರಸಭಾ ಸದಸ್ಯ ಎಂ.ಸತೀಶ್ ಕುಮಾರ್ ಮಾತನಾಡಿ, `ಎಲ್ಲಾ ಮಕ್ಕಳಿಗೂ ಈ ಸೌಲಭ್ಯ ತಲುಪುವಂತೆ ಶಿಕ್ಷಕರು ಗಮನಹರಿಸಬೇಕು' ಎಂದರು.

ಪುರಸಭಾ ಸದಸ್ಯ ಎಸ್.ಭಾಸ್ಕರ್, `ಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಡರನ್ನಾಗಿ ಇದು ಸಹಕಾರಿ' ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನರಸಿಂಹನಾಯಕ್, ಪ್ರಾಂಶುಪಾಲ ಸಂಕರ್ ಹೆಗಡೆ, ಉಪಪ್ರಾಂಶುಪಾಲ ರಾಮಚಂದ್ರ, ಪುರಸಭಾ ಸದಸ್ಯರಾದ ಭಾರತಿ ಮುನಿಕೃಷ್ಣಪ್ಪ, ಅನಸೂಯಮ್ಮ ಸಂಪತ್, ವರದರಾಜು ಇದ್ದರು. ಸುಬ್ಬಲಕ್ಷ್ಮಿ ಪ್ರಾರ್ಥಿಸಿದರು. ಶಿಕ್ಷಕ ಕೊಟ್ರೇಶ್ ಸ್ವಾಗತಿಸಿದರು. ಉಪಪ್ರಾಂಶುಪಾಲ ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ್ ನಿರೂಪಿಸಿ, ಮುನಿಶಾಮಣ್ಣ ವಂದಿಸಿದರು.

`ಬೆಳವಣಿಗೆಗೆ ಪೂರಕ'
ಆನೇಕಲ್:
ರಾಜ್ಯದಲ್ಲಿ ಕೆಲವು ಮಕ್ಕಳಿಗೆ ಉತ್ತಮ ಆಹಾರ ಮತ್ತು ಸರಿಯಾದ ಪೋಷಣೆ ಇಲ್ಲದೆ ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುವ ಮಕ್ಕಳನ್ನು ಸಂಪೂರ್ಣ ಬೆಳವಣಿಗೆ ಹೊಂದುವಂತೆ ಮಾಡುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ಕ್ಷೀರ ಯೋಜನೆ ಜಾರಿಗೆ ತಂದಿದೆ' ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ತಿಳಿಸಿದರು.

ಪಟ್ಟಣದ ಎಎಸ್‌ಬಿ ಸರ್ಕಾರಿ ಶಾಲೆಯಲ್ಲಿ ಕ್ಷೀರಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, `ಎಲ್ಲಾ ಮಕ್ಕಳು ಯೋಜನೆಯ ಸದುಪಯೋಗಿಸಿಕೊಂಡು ಉತ್ತಮ ಆರೋಗ್ಯ ರೂಪಿಸಿಕೊಳ್ಳಬೇಕು' ಎಂದರು.

`ಕೆಲವು ಬಡ ಮಕ್ಕಳಿಗೆ ಉತ್ತಮವಾದ ಆಹಾರ ಸರಿಯಾದ ಪೋಷಣೆ ಇಲ್ಲದೆ  ಗ್ರಹಿಕೆ ಶಕ್ತಿ, ಏಕಾಗ್ರತೆ ಮತ್ತು ಬೆಳವಣಿಗೆಯಲ್ಲಿ ಹಿಂದೆ ಬೀಳುತ್ತಿವೆ. ಇದನ್ನು ಮನಗಂಡು ರಾಜ್ಯ ಸರ್ಕಾರ ಬಿಸಿಯೂಟದ ಜೊತೆ ಕ್ಷೀರ ಯೋಜನೆಯನ್ನೂ ಜಾರಿಗೆ ತಂದಿದೆ' ಎಂದರು.
ತಾಲ್ಲೂಕು ಕೆಎಮ್‌ಎಫ್ ಅಧಿಕಾರಿ ಗೋಪಾಲ್ ಕೃಷ್ಣ, ಪ್ರಾಂಶುಪಾಲರಾದ ಲತಾಮಣಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಬಾಗ್ಯಲಕ್ಷ್ಮೀ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.