ADVERTISEMENT

ಅರ್ಚಕರ ಸಮಸ್ಯೆ: ಫೆ.10ರಂದು ಸಮಾವೇಶ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST
ಅರ್ಚಕರ ಸಮಸ್ಯೆ: ಫೆ.10ರಂದು ಸಮಾವೇಶ
ಅರ್ಚಕರ ಸಮಸ್ಯೆ: ಫೆ.10ರಂದು ಸಮಾವೇಶ   

ದೊಡ್ಡಬಳ್ಳಾಪುರ : ಅರ್ಚಕರ ವಿವಿಧ ಸಮಸ್ಯೆಗಳ ಬಗ್ಗೆ ಗಮನಸೆಳೆಯಲು  ಫೆ. 10 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಅರ್ಚಕರ ಸಮಾವೇಶ ನಡೆಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶ್ರೀವತ್ಸ ಹೇಳಿದರು.

ನಗರದ ಸೋಮೇಶ್ವರ ದೇವಾಲಯದಲ್ಲಿ ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ಮುಜರಾಯಿ ಇಲಾಖೆ ಗುಮಾಸ್ತರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗುತ್ತಿರುವ ನಾರಾಯಣರಾವ್ ಅವರಿಗೆ ಹಮ್ಮಿಕೊಂಡಿದದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಜರಾಯಿ ಇಲಾಖೆ ಸರ್ಕಾರರಿಂದ ನಡೆಯುತ್ತಿದ್ದರೂ ಇಲಾಖೆ ವ್ಯಾಪ್ತಿಯ ಅರ್ಚಕರನ್ನು ಡಿ.ದರ್ಜೆ ನೌಕರರಿಗಿಂತ ಕಡಿಮೆಯಾಗಿ ನಡೆಸಿಕೊಳ್ಳಲಾಗುತ್ತಿದೆ. ಅರ್ಚಕರ ಜೀವನ ಮಟ್ಟ ಸುಧಾರಿಸುವ ದಿಸೆಯಲ್ಲಿ ಮಾಸಿಕ ವೇತನವನ್ನು 10 ಸಾವಿರಕ್ಕೆ ಏರಿಸುವ ಕುರಿತು ಹಾಗೂ ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ಹಿನ್ನೆಲೆಯಲ್ಲಿ ಸಮಾವೇಶ ನಡೆಸಲಾಗುತ್ತಿದೆ. 

   ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದ ಮೇಲೆ ಅರ್ಚಕರು ವ್ಯವಸಾಯ ಮಾಡುತ್ತಿದ್ದ ಜಮೀನುಗಳು ಪರೆಭಾರೆಯಾಗಿ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಮುಜರಾಯಿ ಅರ್ಚಕರ ಸಂಘ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದು ಸಮಸ್ಯೆ ಈಡೇರುವ ಭರವಸೆ ದೊರೆತಿದೆ. ಅರ್ಚಕರ ಹಾಗೂ ಆಗಮಿಕರ ಇಂತಹ ಹಲವಾರು ಸಮಸ್ಯೆಗಳಿಗೆ ಸಂಘವು ಹೋರಾಟ ನಡೆಸಿದ್ದು, ಹಲವಾರು ಬೇಡಿಕೆಗಳು ಫಲಪ್ರದವಾಗಿವೆ. ಸಂಘವು ಇನ್ನೂ ಹೆಚ್ಚು ಸದೃಢವಾಗುವುದರೊಂದಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕಿದೆ ಎಂದರು. ಫೆ.10ರಂದು ಸಮಾವೇಶ ನಡೆಸಿ ಅರ್ಚಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗುವುದು ಎಂದರು.

ತಹಶೀಲ್ದಾರ್ ಬಿ. ಸಂಪತ್ ಕುಮಾರ್ ಮಾತನಾಡಿ, ಅರ್ಚಕರ ನ್ಯಾಯಯುತ ಬೇಡಿಕೆಗಳಿಗೆ ನಮ್ಮ  ಸ್ಪಂಧನೆಯಿದ್ದು, ತಾಲ್ಲೂಕು ಆಡಳಿತದಲ್ಲಿ ಅರ್ಚಕರಿಗೆ ಆಗಬೇಕಾದ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡುವ ಭರವಸೆ ನೀಡಿದರು.

ಮುಜರಾಯಿ ಇಲಾಖೆಯ ಗುಮಾಸ್ತರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ನಾರಾಯಣರಾವ್ ಅವರನ್ನು ಅಭಿನಂದಿಸಿ, ಬೀಳ್ಕೊಡುಗೆ ನೀಡಲಾಯಿತು. ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಆಂಜನೇಯಾಚಾರ್ಯ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಶಿವರಾಜ್, ತಾ.ಪಂ.ಸದಸ್ಯ ಹಾಗೂ ತಾಲ್ಲೂಕು ಅರ್ಚಕರ ಸಂಘದ ಗೌರವಾಧ್ಯಕ್ಷ ಅಧ್ಯಕ್ಷ ಎಸ್.ಆರ್.ನಾಗರಾಜ್, ಉಪಾಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸರಾಘವನ್, ಜಂಟಿ ಕಾರ್ಯದರ್ಶಿ ಸುರೇಶ್‌ಮೂರ್ತಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.