ದೇವನಹಳ್ಳಿ : ರಾಜ್ಯದ ಇತಿಹಾಸದಲ್ಲಿ ಸ್ವಾತಂತ್ರ್ಯ ಬಂದು ಆಡಳಿತ ನಡೆಸಿದ ಎಲ್ಲಾ ಪಕ್ಷದ ಸರ್ಕಾರಗಳು ಎಲ್ಲ ರೀತಿಯಿಂದ ವಂಚನೆ ಮಾಡುತ್ತಿವೆ ಎಂದು ರಾಜ್ಯ ರೈತ ಸಂಘ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ದೂರಿದರು.
ತಾಲ್ಲೂಕಿನ ಬಿದಲೂರು ರೈತ ಘಟಕ ಮತ್ತು ಮಾಳಿಗೇನಹಳ್ಳಿ ರೈತ ಘಟಕ ಉದ್ಘಾಟನೆಯ ನಂತರ ಬಿದಲೂರು ಗ್ರಾಮದಲ್ಲಿ ನಡೆದ ರೈತ ಸಂಘ ಜಿಲ್ಲಾ ಸಮಿತಿ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಆಯ್ಕೆಗೊಂಡ ಅನೇಕ ಶಾಸಕರು ಭರವಸೆ ನೀಡಿದ್ದಾರೆಯೇ ಹೊರತು ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನಿಸುತ್ತಿಲ್ಲ, ವಿಮಾನ ನಿಲ್ದಾಣದಿಂದ ಭೂಮಾಫಿಯಾ ಮತ್ತು ರಾಜಕಾರಣಿಗಳಿಗೆ ಅನುಕೂಲ ಹೊರತು ರೈತರಿಗೆ ಏನೂ ಇಲ್ಲ ಎಂದರು.
ರೈತ ಸಂಘ ಜಿಲ್ಲಾ ಅಧ್ಯಕ್ಷ ಹೊಸಕೋಟೆ ಕೆಂಚೇಗೌಡ ಮಾತನಾಡಿ, ಚಿಕ್ಕಬಳ್ಳಾಪುರ ಬಳಿ ಚದಲಪುರ ಮುಂಭಾಗ ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆಗಾಗಿ ಕಳೆದ 126 ದಿನಗಳಿಂದ ಹೋರಾಟ ನಡೆಯುತ್ತಿದೆ ಸರ್ಕಾರ ಇಚ್ಛಾ ಶಕ್ತಿ ತೋರುತ್ತಿಲ್ಲ ಎಂದರು.
ಹಸಿರುಸೇನೆ ರಾಜ್ಯ ಸಂಚಾಲಕ ಕೆ.ಎಸ್.ಹರೀಶ್ ಮಾತನಾಡಿ, ಸರ್ಕಾರದ ಅವೈಜ್ಞಾನಿಕ ಕೃಷಿ ನೀತಿಯಿಂದ ರೈತರ ಆತ್ಮಹತ್ಯೆ ನಿರಂತರವಾಗಿದೆ ಎಂದರು.
ರೈತ ಸಂಘ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿನ ರೈತರು ದಿವಾಳಿಯಾಗಿದ್ದಾರೆ, ಕೃಷಿ ಪಂಡಿತ ಪ್ರಶಸ್ತಿ ಪಡೆದ ಒಬ್ಬ ರೈತನಿಗೆ ಎರಡು ವರ್ಷವಾದರೂ ಪ್ರಶಸ್ತಿ ಮೊತ್ತ 25 ಸಾವಿರ ತಲುಪಿಲ್ಲ ಎಂದರು.
ವಿಧಾನಪರಿಷತ್ ಚುನಾವಣೆಯಲ್ಲಿ ಪಂಚಾಯಿತಿ ಒಬ್ಬ ಸದಸ್ಯರಿಗೆ 25 ಸಾವಿರ ಹಣ ಎಂದರೆ ಹಣವಂತರಿಗೆ ಚುನಾವಣೆಯಾಗಿದೆ, ರಾಜಕಾರಣಿಗಳ ಹಿಂದೆ ಓಡಾಡಬೇಡಿ. ಪ್ರಾಮಾಣಿಕ ರೈತ ಮುಖಂಡರಿಗೆ ರಾಜಕೀಯ ದಿಕ್ಸೂಚಿ ಸಂಘ ಮಾಡಬೇಕಾಗಿದೆ ಎಂದರು.
ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವೆಂಕಟೇಶ್, ತಾಲ್ಲೂಕು ಅಧ್ಯಕ್ಷ ಗಾರೆರವಿ ಕುಮಾರ್, ಗ್ರಾಮಪಂಚಾಯಿತಿ ಅಧ್ಯಕ್ಷ ನಾಗೇಗೌಡ, ರೈತ ಮುಖಂಡ ಗೋಪಾಲಸ್ವಾಮಿ ಮಾತನಾಡಿದರು. ರೈತ ಸಂಘ ತಾಲ್ಲೂಕು ಕಾರ್ಯಾಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಮುನಿಶಾಮಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಶಿಧರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಪ್ರಕಾಶ್ ಹಾಗೂ ವಿವಿಧ ತಾಲ್ಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಗತಿ ಪರ ರೈತರಾದ ನಾಗಮ್ಮ, ಮುತ್ತೂರು ಕೃಷ್ಣಪ್ಪ, ಮುನಿಕೃಷ್ಣ, ಪುಟ್ಟಣ್ಣ, ಕೋಡಗುರ್ಕಿ ಕೃಷ್ಣಪ್ಪ, ವೆಂಕಟೇಶ, ಎಂ.ಪ್ರಕಾಶ್, ಲಕ್ಷ್ಮಮ್ಮ, ನಾರಾಯಣಸ್ವಾಮಿ ರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.