ADVERTISEMENT

ಕಂಗೆಡಿಸಿದ ದ್ರಾಕ್ಷಿ ಬೆಲೆ ತೀವ್ರ ಕುಸಿತ

ಶೇ 50ರಷ್ಟು ಬೆಲೆ ಇಳಿಕೆ; ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಖರೀದಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 9:30 IST
Last Updated 3 ಜೂನ್ 2017, 9:30 IST
ವಿಜಯಪುರ ಸಮೀಪದ ಪುರ ಗ್ರಾಮದಲ್ಲಿ ರೈತರು ಬೆಳೆದಿರುವ ದ್ರಾಕ್ಷಿ ಕಟಾವಿಗೆ ಸಿದ್ಧವಾಗಿದೆ.
ವಿಜಯಪುರ ಸಮೀಪದ ಪುರ ಗ್ರಾಮದಲ್ಲಿ ರೈತರು ಬೆಳೆದಿರುವ ದ್ರಾಕ್ಷಿ ಕಟಾವಿಗೆ ಸಿದ್ಧವಾಗಿದೆ.   

ವಿಜಯಪುರ: ಬಯಲು ಸೀಮೆಯ ರೈತರು ಕಡಿಮೆ ನೀರಿನಲ್ಲೂ ಕಷ್ಟಪಟ್ಟು ಬೆಳೆಯುವಂತಹ ವಾಣಿಜ್ಯ ಬೆಳೆ ದ್ರಾಕ್ಷಿ. ಈ ದ್ರಾಕ್ಷಿ ಬೆಲೆ ದಶಕದಲ್ಲೆ ದಾಖಲೆಯ ಕುಸಿತ ಕಂಡಿದೆ.

ಇದರಿಂದ ದ್ರಾಕ್ಷಿ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ ಎಂದು ರೈತರಾದ ಮಂಡಿಬೆಲೆ ದೇವರಾಜಪ್ಪ, ನಂಜುಂಡಪ್ಪ, ನಾರಾಯಣಸ್ವಾಮಿ, ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಒಂದು ದಶಕದಲ್ಲಿಯೆ ಅತಿ ಹೆಚ್ಚು ಬೆಲೆ ಕುಸಿತ ಕಂಡಿದ್ದು, ತೋಟಗಾರಿಕೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಶೇ 50ರಷ್ಟು ಬೆಲೆ ಕುಸಿದಿದೆ. ಪ್ರತಿ ಕೆ.ಜಿ. ದ್ರಾಕ್ಷಿಯ ಬೆಲೆ ಸರಾಸರಿ ₹30 ರಿಂದ 35 ಇದ್ದುದು ₹10 ರಿಂದ 12ಕ್ಕೆ ಕುಸಿದಿದೆ. ಇದರ ಪರಿಣಾಮವಾಗಿ ದ್ರಾಕ್ಷಿ ಬೆಳೆಗಾರರು, ಬೆಳೆದಿರುವ ಬೆಳೆಯನ್ನು ಕಟಾವು ಮಾಡುವವರು ಇಲ್ಲದೆ ಕಂಗಾಲಾಗಿದ್ದಾರೆ. ಬಹುತೇಕ ತೋಟಗಳಲ್ಲಿ ದ್ರಾಕ್ಷಿ ಮಾರಾಟವಾಗದೆ, ಕಟಾವು ಆಗದೆ ಕೊಳೆಯಲಾರಂಭಿಸಿದೆ. ಅದನ್ನು ಗಮನಿಸಿ ಕೆಲ ರೈತರು ಮೂಕವೇದನೆ ಅನುಭವಿಸುತ್ತಿದ್ದಾರೆ.

ADVERTISEMENT

ದಶಕದಲ್ಲಿ ಕೆ.ಜಿ.ದ್ರಾಕ್ಷಿಯ ಬೆಲೆ ₹10 ಕ್ಕೆ ಕುಸಿತವಾಗಿರುವುದು ಇದೇ ಮೊದಲು. ಇದರಿಂದಾಗಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಜಿಲ್ಲೆಗಳಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿ ವಿವಿಧ ತಳಿಯ ದ್ರಾಕ್ಷಿಯನ್ನು ಬೆಳೆದಿರುವ ಸಾವಿರಾರು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಕೆಲ ರೈತರು ರೆಡ್ ಗ್ಲೋಬ್, ಸೋನಾಕಾ, ದಿಲ್ ಕುಶ್ ತಳಿಯ ದ್ರಾಕ್ಷಿಯನ್ನು ಕಟಾವು ಮಾಡಿ, ಬಾವಿಗಳಿಗೆ ಎಸೆದಿದ್ದಾರೆ. ಈಗಿರುವ ತೋಟಗಳನ್ನು ಖಾಲಿ ಮಾಡಿಕೊಡುವಂತೆ ವ್ಯಾಪಾರಸ್ಥರಿಗೆ ದುಂಬಾಲು ಬೀಳುತ್ತಿದ್ದಾರೆ.

ಇಲ್ಲಿ ಬೆಳೆದ ದ್ರಾಕ್ಷಿ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಸೇರಿದಂತೆ ಹೊರದೇಶಗಳಿಗೂ ರಫ್ತಾಗುತ್ತದೆ.

ನಿಗದಿ ಮಾಡಿದ್ದೇ ಬೆಲೆ: ತಮಗೆ ಪರಿಚಯವಿರುವ ವ್ಯಾಪಾರಿಗಳ ಕೈ ಕಾಲು ಹಿಡಿದು ತೋಟಕ್ಕೆ ಕರೆದುಕೊಂಡು ಬರುತ್ತಿರುವ ರೈತರು,  ಬೆಲೆ ನಿಗದಿ ಮಾಡಿಸುತ್ತಾರೆ.

ತೂಕವನ್ನೂ ಹಾಕದೆ ಸಗಟಾಗಿ ದ್ರಾಕ್ಷಿಯನ್ನು ಕಟಾವು ಮಾಡಿ ಬುಟ್ಟಿಗೆ ತುಂಬಿಸಿ ಕಳುಹಿಸಿಕೊಡುತ್ತಿದ್ದಾರೆ. ವ್ಯಾಪಾರಿಗಳು ರೈತರ ಕೈಗೆ ನಯಾ ಪೈಸೆಯನ್ನು ಕೊಡದೆ, ಬಿಳಿ ಚೀಟಿ ಕೊಟ್ಟು ದ್ರಾಕ್ಷಿಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಬೆಲೆ, ತೂಕದ ಬಗ್ಗೆ ಮಾತನಾಡಿದರೆ ಮತ್ತೆ ತೋಟಕ್ಕೆ ಬರುವುದಿಲ್ಲ, ತೋಟ ಖಾಲಿ ಮಾಡುವುದಿಲ್ಲ. ಈಗ ವಿಳಂಬ ಮಾಡಿದರೆ ಮುಂದಿನ ಬೆಳೆ ಬರುವುದಿಲ್ಲವೆಂಬ ಆತಂಕ ರೈತರದ್ದಾಗಿದೆ.

ಸರ್ಕಾರ ಖರೀದಿ ಮಾಡಬೇಕು: ಪ್ರಮುಖ ವಾಣಿಜ್ಯ ಬೆಳೆಯಾಗಿರುವ ದ್ರಾಕ್ಷಿ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕಾದರೆ, ಇತರೆ ಹಣ್ಣಿನ ಬೆಳೆಗಳಂತೆಯೆ ಅದನ್ನೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಮೂಲಕ  ಖರೀದಿಸುವ ವ್ಯವಸ್ಥೆಯಾಗಬೇಕು. ಈ ಬೆಳೆಗೆ ಅಗತ್ಯ ಔಷಧಿಗಳನ್ನು ಸರ್ಕಾರವೇ ಪೂರೈಸಬೇಕು. ಸರ್ಕಾರವೇ ಖರೀದಿ ಮಾಡಬೇಕು ಎಂದು ರೈತರಾದ ದೇವರಾಜಪ್ಪ, ಬಸವರಾಜು, ಅಣ್ಣಯ್ಯಪ್ಪ ಒತ್ತಾಯಿಸಿದ್ದಾರೆ.

**

ಹಾಕಿದ ಬಂಡವಾಳ ಸಿಗುತ್ತಿಲ್ಲ

ಇದೀಗ ಹಾಕಿದ ಬಂಡವಾಳವೂ ಸಿಗಲಾರದು ಎಂದು ರೈತ ಮುನಿರಾಜು ತಿಳಿಸಿದ್ದಾರೆ.

ಈ ಬೆಳೆಗೆ ಬಂಡವಾಳವೂ ಅಧಿಕ, ದ್ರಾಕ್ಷಿ ಸಸಿ ನಾಟಿ, ಕಾಂಪೌಂಡ್ ನಿರ್ಮಾಣ ಮಾಡಿ, ರಸಗೊಬ್ಬರ, ಕಾಲ ಕಾಲಕ್ಕೆ ಚಿಗುರು ಕಟಾವು, ಬಳ್ಳಿ ಕಟಾವು ಅಂತ ಲಕ್ಷಗಟ್ಟಲೆ ಬಂಡವಾಳ ಸುರಿಯಬೇಕು. ನಾಟಿ ಮಾಡಿದ ಒಂದೂವರೆ– ಎರಡು ವರ್ಷದ ನಂತರ  ಫಸಲು ಸಿಗಲಾರಂಭಿಸುತ್ತದೆ. ಇಷ್ಟೆಲ್ಲಾ ಕಷ್ಟಪಟ್ಟು ಬೆಳೆದರೂ ಹಾಕದ ಬಂಡವಾಳ ಸಿಗುತ್ತಿಲ್ಲ ಎಂದರು.

**

‘ವ್ಯವಸಾಯ’ ರೈತರ ಪಾಲಿಗೆ ಕೊನೆಯ ಎರಡಕ್ಷರದ ಉತ್ತರ ನೀಡುತ್ತದೆ. ಮನೆ ಮಕ್ಕಳೆಲ್ಲಾ ಕಷ್ಟಪಟ್ಟರೂ  ಪ್ರಯೋಜನ ಇಲ್ಲದಂತಾಗಿದೆ
-ರಾಜಣ್ಣ ,
ದ್ರಾಕ್ಷಿ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.