ADVERTISEMENT

ಕಳವು: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ಚನ್ನಪಟ್ಟಣ: ಮನೆ ಮಾಲೀಕರ ವಿಶ್ವಾಸಗಳಿಸಿ ಅವರ ಮನೆಯಿಂದ ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾಗಿದ್ದ ಕಳ್ಳನನ್ನು ಎಂ.ಕೆ.ದೊಡ್ಡಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಲೋಕೇಶ್ (30) ಬಂಧಿತ ಆರೋಪಿ. ಈತ ತಾಲ್ಲೂಕಿನ ಮಾಕಳಿ ಗ್ರಾಮದ ಶಂಭುಲಿಂಗೇಗೌಡರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ. ಟಿವಿ ನೋಡಲೆಂದು ಶಂಭುಲಿಂಗೇಗೌಡರ ಮನೆಗೆ ನಿತ್ಯವೂ ತೆರಳಿ ಅವರ ವಿಶ್ವಾಸಗಳಿಸಿದ್ದ.

ಅವರ ಮನೆಯ ಪೂರ್ವಾಪರಗಳನ್ನು ತಿಳಿದುಕೊಂಡು ಕೊನೆಗೆ ಅಲ್ಮೇರಾದಲ್ಲಿ ಇರಿಸಿದ್ದ ಚಿನ್ನದ ಚೈನ್, ನೆಕ್ಲೇಸ್, ಉಂಗುರ ಸೇರಿದಂತೆ 41ಗ್ರಾಂ ತೂಕದ ಚಿನ್ನಾಭರಣ ಹಾಗೂ 10 ಸಾವಿರ ರೂಪಾಯಿ ನಗದು ದೋಚಿ ಪತ್ನಿಯೊಡನೆ ಪರಾರಿಯಾಗಿದ್ದ.ಈ ಬಗ್ಗೆ ಎಂ.ಕೆ.ದೊಡ್ಡಿಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಎಸ್ಪಿ ಎಸ್.ಬಿ.ಬಿಸ್ನಳ್ಳಿ, ಡಿಎಸ್ಪಿ ಸಿದ್ದಪ್ಪ ಮಾರ್ಗದರ್ಶನದಲ್ಲಿ ತನಿಖೆ ಆರಂಭಿಸಿದ ಗ್ರಾಮಾಂತರ ಸಿಪಿಐ ಸುಬ್ರಹ್ಮಣ್ಯ, ಪಿಎಸ್‌ಐ ಎನ್. ಶೋಭಾ ಲೋಕೇಶನ ಬಗ್ಗೆ ಮಾಹಿತಿ ಸಂಗ್ರಹಿಸಿ ಬಂಧಿಸಿದ್ದಾರೆ.  ಆರೋಪಿ ಲೋಕೇಶ್‌ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ತಲೆ ಮರೆಸಿ ಕೊಂಡಿರುವ ಪತ್ನಿ ಕಲಾಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.