ADVERTISEMENT

ಕಿತ್ತಗಾನಹಳ್ಳಿ: ಸಂಭ್ರಮದ ಶ್ರೀನಿವಾಸ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 6:47 IST
Last Updated 7 ಮಾರ್ಚ್ 2014, 6:47 IST

ಆನೇಕಲ್‌:  ತಾಲ್ಲೂಕಿನ ಕಿತ್ತಗಾನಹಳ್ಳಿ ಶ್ರೀನಿವಾಸ ದೇವರ ಬ್ರಹ್ಮರಥೋತ್ಸವ ಗುರುವಾರ ಸಂಭ್ರಮ ಸಡಗರಗಳಿಂದ ನಡೆಯಿತು.
ಉತ್ಸವದ ಅಂಗವಾಗಿ ಸ್ವಾಮಿಗೆ ಸುಪ್ರಭಾತ ಸೇವೆ ಏರ್ಪಡಿಸಲಾಗಿತ್ತು. ಶ್ರೀದೇವಿ ಮತ್ತು ಭೂದೇವಿ ಸಮೇತ ಶ್ರೀನಿವಾಸ ದೇವರ ಉತ್ಸವ ಮೂರ್ತಿಗೆ ಸಂಪ್ರದಾಯಿಕ ಪೂಜೆಗಳನ್ನು ಸಲ್ಲಿಸಿ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸುತ್ತಿ­ದ್ದಂತೆ ಭಕ್ತರು ಗೋವಿಂದಾ ಗೋವಿಂದಾ ss ಎಂದು ಜಯಘೋಷ ಮಾಡಿದರು. ಕೆಲವು ಭಕ್ತರು ಉರುಳು ಸೇವೆ ನಡೆಸಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ವಾಮಿಯ ರಥವನ್ನು ಎಳೆಯಲಾ­ಯಿತು. ಬಿಸಿಲಿನಲ್ಲಿ ಬಂದಿದ್ದ ಭಕ್ತರಿಗೆ ನೀರು ಮಜ್ಜಿಗೆ ಪಾನಕ ಕೋಸಂಬರಿ ನೀಡಲಾ­ಯಿತು. ಭಕ್ತರು ದವನ ಚುಚ್ಚಿದ ಬಾಳೆಹಣ್ಣನ್ನು ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.

ದೇವಾಲಯದ ಪ್ರಧಾನ ಅರ್ಚಕ ಸೂರ್ಯನಾರಾಯಣ ದೀಕ್ಷಿತ್‌ ಮಾತನಾಡಿ, ‘ಫಾಲ್ಗುಣ ಮಾಸದ ಷಷ್ಠಿಯಂದು ರಥೋತ್ಸವ ನಡೆಯುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ. ನಾಗಾರಾಧನೆ, ಶಂಖಾಭಿಷೇಕ, ಕಲ್ಯಾಣೋತ್ಸವವೂ ನಡೆಯುತ್ತದೆ’ ಎಂದು ತಿಳಿಸಿದರು.

ನಂಜುಂಡ ದೀಕ್ಷಿತ್‌, ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್‌ ಪ್ರಸಾದ್‌, ಹರೀಶ್‌, ಪ್ರದೀಪ್‌ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.