ADVERTISEMENT

ಕುಡಿಯುವ ನೀರು; ಅಂತಿಮ ಹಂತಕ್ಕೆ ಪೈಪ್‌ಲೈನ್ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 5:21 IST
Last Updated 20 ಅಕ್ಟೋಬರ್ 2017, 5:21 IST

ಆನೇಕಲ್‌: ಪಟ್ಟಣದ ಬಹುದಿನಗಳ ಬೇಡಿಕೆಯಾದ ಕಾವೇರಿ ಕುಡಿಯುವ ನೀರಿನ ಪೂರೈಕೆಯ ಪೈಪ್‌ಲೈನ್‌ ಕಾಮಗಾರಿ ಅಂತಿಮಗೊಂಡಿದ್ದು ಮುಖ್ಯ ಮಂತ್ರಿಗಳ ದಿನಾಂಕ ದೊರೆಯುತ್ತಿದ್ದಂತೆ ಕಾವೇರಿ ಕುಡಿಯುವ ನೀರಿನ ಪೂರೈಕೆ ಯೋಜನೆಯನ್ನು ಸಾರ್ವಜನಿಕರಿಗೆ ಸಮರ್ಪಣೆ ಮಾಡಲಾಗುವುದು ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.
ಪಟ್ಟಣದ ತಿಲಕ್‌ ವೃತ್ತದಲ್ಲಿ ಕಾವೇರಿ ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದರು.

ಆನೇಕಲ್‌ ಚಿಕ್ಕಕೆರೆ ಬಳಿ ನಿರ್ಮಿಸಿರುವ ಜಲಸಂಗ್ರಹಗಾರಕ್ಕೆ ನೀರು ಪೂರೈಕೆ ಮಾಡುವ ಕಾಮಗಾರಿ ಪಟ್ಟಣದ ಮಧ್ಯಭಾಗದಲ್ಲಿ ಜನನಿಬಿಡ ಪ್ರದೇಶವಾಗಿದ್ದರಿಂದ ತಡವಾಗಿತ್ತು ಎಂದರು.

700 ಮೀಟರ್‌ ಕಾಮಗಾರಿ ಮಾತ್ರ ಉಳಿಕೆಯಿತ್ತು. ಈ ಕಾಮಗಾರಿಯ ಅಂತಿಮ ಹಂತ ಪೂರ್ಣಗೊಂಡಿದ್ದು ಆನೇಕಲ್‌ಗೆ ಕಾವೇರಿ ಕುಡಿಯುವ ನೀರಿನ ಪೂರೈಕೆಗೆ ಸುಗಮವಾಗಿದೆ. ಮುಖ್ಯಮಂತ್ರಿಗಳು ದಿನಾಂಕ ನೀಡುತ್ತಿದ್ದಂತೆ ಶೀಘ್ರದಲ್ಲಿ ಪಟ್ಟಣಕ್ಕೆ ಕಾವೇರಿ ಪೂರೈಕೆ ಮಾಡಲಾಗುವುದು ಎಂದರು.

ADVERTISEMENT

ಇದೊಂದು ಅತ್ಯಂತ ಮಹತ್ವಕಾಂಕ್ಷೆಯ ಯೋಜನೆಯಾಗಿದೆ. ₹ 176 ಕೋಟಿ ವೆಚ್ಚದ ಯೋಜನೆಯಾಗಿದೆ. ಇದರಿಂದಾಗಿ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ ಎಂದರು.

ಆನೇಕಲ್‌ ಥಳಿ ರಸ್ತೆ ಅಗಲೀಕರಣ ಕಾರ್ಯಕ್ಕೆ ಹಣ ಮಂಜೂರಾಗಿದ್ದು ಮನೆಗಳು ಕಳೆದುಕೊಳ್ಳುವವರಿಗೆ ಪರಿಹಾರ ನಿಗದಿಯಾಗಿದ್ದು ವಿತರಣೆ ಮಾಡಿದ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಆನೇಕಲ್‌ನಲ್ಲಿ ಉದ್ಯೋಗ ಮೇಳ, ಹೆಣ್ಣುಮಕ್ಕಳ ಪ್ರೌಢ ಶಾಲಾ ಕಟ್ಟಡ ಉದ್ಘಾಟನೆ ಸೇರಿದಂತೆ ಹಲವು ಕಾಮಗಾರಿಗಳನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ಶೀಘ್ರದಲ್ಲಿ ದಿನಾಂಕ ನಿಗದಿಪಡಿಸಲಾಗುವುದು ಎಂದರು. ಪುರಸಭಾ ಸದಸ್ಯರಾದ ಮಲ್ಲಿ ಕಾರ್ಜುನ್, ಮುನಾವರ್, ಶೈಲೇಂದ್ರಕುಮಾರ್, ಮುಖಂಡರಾದ ರವಿಚೇತನ್, ಚಿನ್ನಪ್ಪ, ಮುರಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.