ADVERTISEMENT

ಖಾಸಗಿ ವಾಹನ ಹಾವಳಿ: ಇಲಾಖೆಗೆ ನಷ್ಟ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ವಿಜಯಪುರ: ನಲ್ಲೂರು ಕ್ರಾಸ್‌ನಿಂದ ದೇವನಹಳ್ಳಿ ಮಾರ್ಗವಾಗಿ ಪರವಾನಗಿ ಇಲ್ಲದ ಖಾಸಗಿ ಆಟೊ ರಿಕ್ಷಾ ಹಾಗೂ ಟಾಟಾ ಸುಮೊಗಳ ಹಾವಳಿಯಿಂದ ಸಾರಿಗೆ ಸಂಸ್ಥೆಗೆ ನಷ್ಟವುಂಟಾಗುತ್ತಿದೆ ಎಂದು ಇಲ್ಲಿನ ಸಾರಿಗೆ ಇಲಾಖೆ ಬಸ್ ಸಿಬ್ಬಂದಿ ಆರೋಪಿಸಿದರು.

ನಲ್ಲೂರು ಕ್ರಾಸ್ ಮಾರ್ಗವಾಗಿ ದೇವನಹಳ್ಳಿಗೆ ಸುಮಾರು 7 ಬಸ್‌ಗಳು ತಲಾ 8 ಟ್ರಿಪ್ ಸಂಚರಿ ಸುತ್ತಿದ್ದು, ಪ್ರತಿ ಟ್ರಿಪ್‌ಗೆ 150 ರೂ ನಂತೆ 8 ಟ್ರಿಪ್‌ಗೆ 1200 ರೂ ಆದಾಯ ಕಡಿಮೆ ಆಗುವುದರ ಜೊತೆಗೆ 7 ಬಸ್‌ಗಳಿಂದ ಪ್ರತಿದಿನ 8,400 ರೂ.ಗಳಷ್ಟು ಆದಾಯ ತಪ್ಪಿ ಹೋಗುತ್ತಿದೆ ಎಂದು ದೂರಿದರು.

ಇಲಾಖೆ ಆದಾಯಕ್ಕೆ ಕತ್ತರಿ
ನಲ್ಲೂರು ಮಾರ್ಗದಲ್ಲಿ ಹೊಸಕೋಟೆ ದೇವನ ಹಳ್ಳಿಗೆ ಪ್ರತಿ 20 ನಿಮಿಷಕ್ಕೊಂದರಂತೆ ಬಸ್‌ಗಳು ಸಂಚರಿಸುತ್ತವೆ. ಇದರ ನಡುವೆ ಪರವಾನಗಿ ಇಲ್ಲದ ಸುಮಾರು 10 ಆಟೊರಿಕ್ಷಾ ಮತ್ತು 5ಕ್ಕಿಂತ ಹೆಚ್ಚು ಟಾಟಾ ಸುಮೊಗಳು ಬಸ್ ನಿಲ್ದಾಣದ ಹಿಂದೆ- ಮುಂದೆ ನಿಲ್ಲಿಸಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಯಾಣಿಕರನ್ನು ಹತ್ತಿಸಿಕೊಡು ಸಂಚರಿಸುತ್ತಿವೆ ಎಂದು ದೂರಲಾಗಿದೆ.

ನಿತ್ಯ ಜಗಳ
ನಿಲ್ದಾಣದಲ್ಲಿ ಬಸ್‌ಗಳಿಲ್ಲದ ಸಂದರ್ಭದಲ್ಲಿ ಪ್ರಯಾಣಿಕರು ಖಾಸಗಿ ವಾಹನಗಳಿಗೆ ಮೊರೆ ಹೋಗುವುದು ಸಾಮಾನ್ಯ. ಆದರೆ ನಿಲ್ದಾಣದಲ್ಲಿ ಬಸ್‌ಗಳಿದ್ದರೂ ಬಸ್‌ನಲ್ಲಿ ಕುಳಿತಿರುವ ಪ್ರಯಾಣಿಕರನ್ನು ಇಳಿಸಿಕೊಂಡು ಹೋಗುತ್ತಿದ್ದು, ಚಾಲಕ, ನಿರ್ವಾಹಕರ ತಾಳ್ಮೆಯನ್ನು ಕೆಣಕುವಂತಾಗಿದೆ. ಈ ವಿಚಾರವಾಗಿ ಸಾರಿಗೆ ಸಿಬ್ಬಂದಿಯು ಟಾಟಾ ಸುಮೊ ಮತ್ತು ರಿಕ್ಷಾ ದವರ ವಿರುದ್ಧ ಪ್ರತಿದಿನ ಜಗಳ ಕಾಯುವಂತಾಗಿದೆ.

ಪೊಲೀಸರ ಅಸಹಾಯಕತೆ
ಪರವಾನಗಿ ಇಲ್ಲದ ಟಾಟಾ ಸುಮೊ ಮತ್ತು ಆಟೊರಿಕ್ಷಾಗಳು ಸಂಚರಿಸುತ್ತಿರುವ ವ್ಯಾಪ್ತಿಯ ಪ್ರದೇಶದಲ್ಲಿ ಸೂಲಿಬೆಲೆ, ಚನ್ನರಾಯಪಟ್ಟಣ ಮತ್ತು ದೇವನಹಳ್ಳಿ ಪೊಲೀಸ್ ಠಾಣೆ ಸೇರಿದಂತೆ ಮೂರು ಠಾಣೆಗಳು ಒಳಪಡುತ್ತವೆ. ಆದರೂ ಈ ಮೂರು ಠಾಣೆಗಳ ಪೊಲೀಸರು ಇದನ್ನು ಕಂಡೂ ಕಾಣದಂತೆ ಇದ್ದಾರೆ. ಬಸ್ ಚಾಲಕ, ನಿರ್ವಾಹಕ ಮತ್ತು ಟಾಟಾ ಸುಮೊ, ಆಟೋರಿಕ್ಷಾದವರ ಜಗಳವನ್ನು ಬಿಡಿಸುವ ಗೋಜಿಗೆ ಸಂಚಾರಿ ಪೊಲೀಸರು ಹೋಗುವುದಿಲ್ಲ ಎಂದು ನಿರ್ವಾಹಕರು ದೂರಿದ್ದಾರೆ.

ಸುರಕ್ಷಿತ ಪ್ರಯಾಣಕ್ಕೆ ಸಲಹೆ
ಈ ಮಾರ್ಗದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಸಂಚರಿಸುವ ಟಾಟಾ ಸುಮೊಗಳು ಹಲವಾರು ಬಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ, ಸಾವು ನೋವು ಸಂಭವಿಸಿರುವ ಘಟನೆ ನಡೆದಿವೆ.

ಪ್ರಯಾಣಿಕರು ಬೇಗ ಮನೆ ಸೇರುವ ಆತುರದಲ್ಲಿ ಈ ರೀತಿ ಅಸುರಕ್ಷಿತವಾಗಿ ಪ್ರಯಾಣಿಸದೆ, ಸರ್ಕಾರಿ ಸಾರಿಗೆ ವಾಹನಗಳನ್ನು ಬಳಸುವಂತೆ ಸಿಬ್ಬಂದಿ ಮನವಿ ಮಾಡಿದ್ದಾರೆ.

ಆಗ್ರಹ
ಪರವಾನಗಿ ಇಲ್ಲದ ವಾಹನಗಳು ಸಂಚರಿಸುತ್ತಿ ರುವ ಈ ಮಾರ್ಗದಲ್ಲಿ ಆರ್‌ಟಿಓ ಅಧಿಕಾರಿಗಳು, ಸಂಚಾರಿ ಪೊಲೀಸರು ಜಾಗೃತರಾಗಿ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ರಸ್ತೆ ಸಾರಿಗೆ ಸಿಬ್ಬಂದಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.