ADVERTISEMENT

ಗ್ರಾಮೀಣ ಭಾಗಕ್ಕೆ ಮೂಲ ಸೌಲಭ್ಯ: ಬೈಕ್ ರ್ಯಾಲಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 18:30 IST
Last Updated 18 ಫೆಬ್ರುವರಿ 2011, 18:30 IST

ಆನೇಕಲ್: ಗ್ರಾಮೀಣ ಭಾಗಕ್ಕೆ  ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ಜನಾಂದೋಲನ ಸಂಘಟನೆ ಕಸಬಾ ಹೋಬಳಿ ಘಟಕದ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು.ದೇವರಕೊಂಡಪ್ಪ ವೃತ್ತದಿಂದ ಕಸಬಾ ಹೋಬಳಿ ಗ್ರಾಮ ಪಂಚಾಯಿತಿಗಳಾದ ಸಮಂದೂರು, ವಣಕನಹಳ್ಳಿ, ಇಂಡ್ಲವಾಡ, ಸುರಗಜಕ್ಕನಹಳ್ಳಿ, ಬ್ಯಾಗಡದೇನಹಳ್ಳಿ, ಮರಸೂರು, ಕರ್ಪೂರು ಗ್ರಾಮ ಪಂಚಾಯಿತಿಗಳಲ್ಲಿ  ರ್ಯಾಲಿ ನಡೆಸಿ  ಸೌಲಭ್ಯಗಳನ್ನು ಒದಗಿಸುವಂತೆ ಗ್ರಾ.ಪಂ. ಅಧ್ಯಕ್ಷರು ಮತ್ತು ಪಿಡಿಒಗೆ  ಮನವಿ ಸಲ್ಲಿಸಿದರು.

ನಂತರ  ರಾಜ್ಯ ಘಟಕದ ಅಧ್ಯಕ್ಷ  ಮರಿಯಪ್ಪ  ಮಾತನಾಡಿ, ಗ್ರಾ. ಪಂ. ವತಿಯಿಂದ ಹಳ್ಳಿಗಳಿಗೆ ಕುಡಿಯುವ ನೀರು, ಚರಂಡಿ, ಬೀದಿ ದೀಪ, ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿದರು.ಇತ್ತೀಚಿಗೆ ಪಂಚಾಯಿತಿಗಳಲ್ಲಿ ರಾಜಕೀಯ ಉಂಟಾಗಿ ಬಡವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.ರಾಜ್ಯ ಘಟಕದ ಕಾರ್ಯದರ್ಶಿ ಆದೂರು ಪ್ರಕಾಶ್ ಮಾತನಾಡಿ, ಸರ್ಕಾರಿ ಯೋಜನೆಗಳು ಬಡವರಿಗೆ ತಲುಪದೇ, ಭ್ರಷ್ಟರ ಪಾಲಾಗುತ್ತಿವೆ.ಇದರಿಂದ ಬಡತನ ಕಾಯಂ ಘೋಷಣೆಯಾಗಿ ಉಳಿದೆ ಎಂದು ಆತಂಕ ವ್ಯಕ್ತಪಡಿಸಿದರು.

 ಶೋಷಿತ ಸಮುದಾಯಗಳಿಗೆ ಶೇ. 22.5 ರಷ್ಟು ಹಣ ಮೀಸಲಿಟ್ಟಿರುವುದು ನೆಪಮಾತ್ರ. ಈ ಹಣ ಫಲಾನುಭವಿಗಳಿಗೆ ತಲುಪದೇ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದರು.ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿ1700 ಕೋಟಿ ಹಣ ರಾಜ್ಯಕ್ಕೆ ಬಂದಿದ್ದು, ಇದರಲ್ಲಿ ಶೇ. ಶೇ 40 ರಷ್ಟು ಹಣ ಖರ್ಚುಮಾಡಲಾಗದ ಸ್ಥಿತಿಯಲ್ಲಿ  ್ಲಪಂಚಾಯಿತಿಗಳಿವೆ ಎಂದು ಹೇಳಿದರು.

12 ಸಾವಿರ ನಕಲಿ ಜಾಬ್ ಕಾರ್ಡ್‌ಗಳಿದ್ದು,  ಗುತ್ತಿಗೆದಾರರು ಹಣ ಪಡೆಯುತ್ತಿದ್ದಾರೆ. ನಕಲಿ ಜಾಬ್ ಕಾರ್ಡ್‌ಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಕೊಳ್ಳ ಬೇಕು ಎಂದು ಒತ್ತಾಯಿಸಿದರು.ರಾಜ್ಯ ಖಜಾಂಚಿ ರಾಮಸ್ವಾಮಿ, ಬೆಂಗಳೂರು ನಗರ ಘಟಕದ ಜಿಲ್ಲಾಅಧ್ಯಕ್ಷ  ವೆಂಕಟೇಶ್, ಜಿಲಾ ್ಲಕಾರ್ಯದರ್ಶಿ ದೊಡ್ಡಹಾಗಡೆ ಕೃಷ್ಣಪ್ಪ, ಸಿದ್ಧಲಿಂಗಪ್ಪ, ತಾಲ್ಲೂಕು  ಅಧ್ಯಕ್ಷ ಕೆ.ಸಿ.ನಾಗರಾಜು ಮಾತನಾಡಿದರು.

ರ್ಯಾಲಿಯಲ್ಲಿ ಹಾರಗದ್ದೆ ರವಿ, ಎಲ್‌ಐಸಿ ವೆಂಕಟೇಶ್, ಹೊಂಫಲಘಟ್ಟ ರವಿ, ಇಂಡ್ಲವಾಡಿ ಮಾದಯ್ಯ, ಗೌರೇನಹಳ್ಳಿ ಮುನಿರಾಮ್, ರವಿಕಹಳೆ, ಶೇಕರ್, ಯಲ್ಲಪ ಸೇನಾ, ಆನಂದ್, ಅಂಬರೀಶ್, ವೆಂಕಟರಾಜು ವಸಂತ, ಶಿವು, ಬಿದರಗೆರೆ ತಿಮ್ಮರಾಜು, ಮಂಜು, ರಮೇಶ್, ಸುರೇಶ್, ಭದ್ರಯ್ಯ, ಮೂರ್ತಿ, ಸಿದ್ದಪ್ಪ ಹರೀಶ್, ಶಾಂತಕುಮಾರ್, ಮರಿಯಪ್ಪ ಇತರರು ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.