ADVERTISEMENT

ಚನ್ನರಾಯಸ್ವಾಮಿ ಬೆಟ್ಟದ ತಪ್ಪಲು ಕಬಳಿಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 5:52 IST
Last Updated 2 ಜನವರಿ 2014, 5:52 IST

ದೊಡ್ಡಬಳ್ಳಾಪುರ:  ತಾಲ್ಲೂಕಿನಲ್ಲಿ ಕೆರೆ,ಕುಂಟೆ, ರಾಜಕಾಲುವೆ, ಸರ್ಕಾರಿ ರಸ್ತೆಗಳ ಒತ್ತುವರಿಯಷ್ಟೆ ನಡೆಯುತ್ತಿತ್ತು. ಈಗ ಒತ್ತುವರಿ ಪಟ್ಟಿಗೆ ಹೊಸದಾಗಿ ಬೆಟ್ಟವೂ ಸೇರ್ಪಡೆಯಾಗಿದೆ.

ತಾಲ್ಲೂಕಿನ ನಂದಿಗಿರಿ ಶ್ರೇಣಿಗಳ ಸಾಲಿನಲ್ಲಿ (ನಂದಿಗಿರಿ, ಸ್ಕಂದಗಿರಿ, ದಿಬ್ಬಗಿರಿ, ಬ್ರಹ್ಮಗಿರಿ, ಚನ್ನಗಿರಿ) ಬರುವ ಚನ್ನಗಿರಿ ಅಥವಾ ಚನ್ನರಾಯಸ್ವಾಮಿ ಬೆಟ್ಟವನ್ನು ಒತ್ತುವರಿ ಮಾಡಿಕೊಂಡು ಕೃಷಿಯೋಗ್ಯ ಭೂಮಿಯನ್ನಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

  ಬೆಟ್ಟದ ತಪ್ಪಲಿನ ಸಮತಟ್ಟಾದ ಹಾಗೂ ಬೆಟ್ಟದ ಇಳಿ ಜಾರು ಪ್ರದೇಶದಲ್ಲಿಯೇ ಜೆಸಿಬಿ ಯಂತ್ರಗಳ ಬಳಕೆಯಿಂದ ಭೂಮಿಯನ್ನು ಸಮ ತಟ್ಟು ಮಾಡಿ ಕೃಷಿಗೆ ಬಳಕೆ ಮಾಡಿಕೊಳ್ಳ ಲಾಗುತ್ತಿದೆ. ಇದರಿಂದಾಗಿ ಬೆಟ್ಟದ ಮೇಲೆ ಅಲ್ಪ–ಸ್ವಲ್ಪ ಮಳೆ ಬಿದ್ದರು ಸಾಕು ಬಾರಿ ಪ್ರಮಾಣದಲ್ಲಿ ಕೃಷಿಗೆ ಸಮತಟ್ಟು ಮಾಡಲಾಗಿರುವ ಪ್ರದೇಶದಿಂದ ಮಣ್ಣು ಕೊಚ್ಚಿಕೊಂಡು ಬಂದು ಬೆಟ್ಟದ ತಪ್ಪಲಿನಲ್ಲೇ ಇರುವ ಕೆರೆ ಅಂಗಳ ಸೇರಿ ಕೆರೆಯಲ್ಲಿ ಭಾರಿ ಪ್ರಮಾಣದಲ್ಲಿ ಹೂಳು ಶೇಖರಣೆ ಯಾಗುತ್ತಿದೆ.  

‘2009ರಲ್ಲಿ ಚನ್ನರಾಯಸ್ವಾಮಿ ಬೆಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಹೋರಾಟ
ನಡೆದು ಗಣಿ ಗಾರಿಕೆ ನಿಷೇಧಿಸಲಾಗಿತ್ತು. ಇದಾದ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಈ ಭಾಗಕ್ಕೆ ಬರುವುದೇ ಅಪರೂಪ ವಾಗಿದೆ. ಹೀಗಾಗಿಯೇ ಬೆಟ್ಟದ ತಪ್ಪಲಿ ನಲ್ಲಿ  ಒತ್ತುವರಿ ಹಾಗೂ ಮರಗಳು ಕಳವು ಎಗ್ಗಿಲ್ಲದೆ ನಡೆಯುತ್ತಿದೆ’ ಎನ್ನುತ್ತಾರೆ ಸ್ಥಳೀಯರು.

ಅಪರೂಪದ ಔಷಧೀಯ ಸಸ್ಯ ಸಂಪತ್ತು ನಾಶ:
ಚನ್ನರಾಯಸ್ವಾಮಿ ಬೆಟ್ಟದ ಒತ್ತು ವರಿಯಿಂದ ಕೇವಲ ಕೆರೆಯಲ್ಲಿ ಹೂಳು ತುಂಬಿಕೊಳ್ಳುತ್ತಿ
ರುವುದಷ್ಟೇ ಅಲ್ಲ ದೇವರಾಯನದುರ್ಗ, ಸಾವನ ದುರ್ಗ, ಕೋಲಾರ ಜಿಲ್ಲೆಯ ಒಂದೆರಡು ಬೆಟ್ಟ
ಗಳಲ್ಲಿ ಮಾತ್ರ ಕಂಡುಬರುವ ಜಾಲಾರಿ ಮರಗಳು ಸೇರಿದಂತೆ ಅಪರೂಪದ ಔಷಧಿಯ ಸಸ್ಯ ಸಂಪತ್ತು ಭೂಮಿ ಒತ್ತುವರಿಯಿಂದ ನಾಶವಾಗುತ್ತಿದೆ.

ಪುನಶ್ಚೇತನ ಯೋಜನೆಗೆ ಹಿನ್ನಡೆ: ಚನ್ನರಾಯ ಸ್ವಾಮಿ ಬೆಟ್ಟದ ತಪ್ಪಲಿನ ಚಿಕ್ಕರಾಯಪ್ಪನಹಳ್ಳಿ ಕೆರೆಯಿಂದ ಮುಂದೆ ಸಾಗುವ ನೀರು, ಹೂಳು ಅರ್ಕಾವತಿ ಜಲಾನಯನ ಪ್ರದೇಶಕ್ಕೆ ಸೇರ್ಪಡೆ ಯಾಗುತ್ತಿದೆ. ಇದರಿಂದಾಗಿ ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಅರ್ಕಾವತಿ ನದಿಯನ್ನು ಲಂಡನ್‌ನ ‘ಥೇಮ್ಸ್‌’ ನದಿ ಮಾದರಿಯಲ್ಲಿ ಪುನರುಜ್ಜೀವನ ಗೊಳಿಸಲು ತಜ್ಞರ ಸಮಿತಿಯನ್ನು ನೇಮಿ ಸಿದೆ.

   ಒಂದು ಕಡೆ ನಂದಿಗಿರಿ ಶ್ರೇಣಿ ಯಲ್ಲಿನ ಬೆಟ್ಟಗಳಲ್ಲಿ ಹುಟ್ಟುವ ನದಿಗಳ ಪುನಶ್ಚೇತನಕ್ಕೆ ಸರ್ಕಾರ ಇಷ್ಟೆಲ್ಲಾ ಪ್ರಯತ್ನಗಳನ್ನು ನಡೆಸುತ್ತಿರುವ ಸಂದರ್ಭದಲ್ಲೇ ಬೆಟ್ಟವನ್ನೇ ಕಡಿದು ಕೃಷಿಗೆ ಬಳಕೆ ಮಾಡಿಕೊಳ್ಳುತ್ತಿರುವುದು ಸರ್ಕಾ ರದ ಅರ್ಕಾವತಿ ನದಿ ಪುಶ್ಚೇತನ ಯೋಜನೆಗೆ ಭಾರಿ ಹಿನ್ನಡೆಯುಂಟು ಮಾಡುವ ಅಪಾಯಗಳು ಎದುರಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.