ADVERTISEMENT

ದೇವನಹಳ್ಳಿ ಜಿಲ್ಲಾ ಕೇಂದ್ರಕ್ಕೆ ಆಗ್ರಹ

ದೇವನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಕ್ಕೊರಲ ನುಡಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2014, 10:03 IST
Last Updated 12 ಫೆಬ್ರುವರಿ 2014, 10:03 IST

ವಿಜಯಪುರ:  ದೇವನಹಳ್ಳಿಯನ್ನು ಬೆಂಗ­ಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ­ವನ್ನಾಗಿ ಘೋಷಿಬೇಕೆಂದು ಇಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇ­ಳನದಲ್ಲಿ ಒತ್ತಾಯಿಸಲಾಯಿತು.

ಸಮೀಪದ ಯಲಿಯೂರು ಗ್ರಾಮ ಪಂಚಾಯ್ತಿ ಆವರಣದಲ್ಲಿ ನಡೆದ ದೇವನ­ಹಳ್ಳಿಯ ೨೦ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಕುರಿತು ಒಕ್ಕೊರಲ ಹಕ್ಕೊತ್ತಾಯ ಕೇಳಿ­ಬಂತು.

ಸಮ್ಮೇಳನದ ಅಧ್ಯಕ್ಷತೆ ವಹಿಸಿ  ಮಾತನಾಡಿದ ಡಾ.ವಿ.ನಾಗೇಶ್‌ ಬೆಟ್ಟ­ಕೋಟೆ ಅವರು, ‘ಆಂಗ್ಲ ಭಾಷೆಯ ಬಳಕೆಯಿಂದ ಮಾತ್ರವೇ ಅಭಿವೃದ್ಧಿ ಸಾಧ್ಯ ಎಂಬುದು ಸುಳ್ಳು’ ಎಂದು ಹೇಳಿದರು.

‘ಭಾಷೆಯ ಜೊತೆಗೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಿ­ರುವುದು ಸರಿಯಲ್ಲ’ ಎಂದು ಅವರು ತಿಳಿಸಿದರು.
ದೇವನಹಳ್ಳಿಯಲ್ಲಿ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿ­ಸುವ ಉದ್ದೇಶದಿಂದ ರೈತರ ಜಮೀ­ನನ್ನು ಒತ್ತುವರಿ ಮಾಡಿ ಅವರಿಗೆ ಅನ್ಯಾಯ ಮಾಡಲಾಗಿದೆ.  ಸರ್ಕಾರ ಕೂಡ­ಲೇ ರೈತ ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ನೀಡಲಿ’ ಎಂದು ಒತ್ತಾಯಿಸಿದರು.

ಸಮ್ಮೇಳನ ಉದ್ಘಾಟಿಸಿ ಮಾತ­ನಾಡಿದ ಶಾಸಕ ಪಿಳ್ಳಮುನಿಶ್ಯಾಮಪ್ಪ, ‘ಸರ್ಕಾರಿ ಸವಲತ್ತುಗಳು ಫಲಾನು­ಭವಿಗಳಿಗೆ ಸಮರ್ಪಕವಾಗಿ ತಲು­ಪುತ್ತಿಲ್ಲ. ಶಾಶ್ವತ ನೀರಾವರಿ ಯೋಜನೆ ರೂಪಿಸುವಲ್ಲಿ ಸರ್ಕಾರದ ಇಚ್ಛಾ­ಶಕ್ತಿಯ ಕೊರತೆ ಕಂಡುಬರುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿ­ಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ‘ಸರ್ಕಾರಿ  ಶಾಲೆ-­ಗಳು ತಮ್ಮ ಅಸ್ತಿತ್ವ ಕಳೆದು­ಕೊಳ್ಳುವ ಸ್ಥಿತಿ ತಲುಪಿವೆ. ಭಾಷಾ ವಿಷಯ ಕಗ್ಗಂಟಾಗಿ ಒಂದೆಡೆ ಅಸ್ತಿತ್ವ ಕಳೆದುಕೊಳ್ಳುವಂತಾದರೆ ಖಾಸಗಿ ಶಾಲೆಗಳು ಶಿಕ್ಷಣ ನೀಡುವ ಮಾರು­ಕಟ್ಟೆಯ ಸರಕುಗಳಾಂತಾಗಿವೆ’ ಎಂದು ಟೀಕಿಸಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಎನ್.ರಾಜಗೋಪಾಲ್ ಕಾರ್ಯ­ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾ­ಡಿದರು. ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ಚಿ.ಮಾ.­ಸುಧಾಕರ್ ಪ್ರಾಸ್ತಾ­ವಿಕ ಮಾತ­ನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರನ್ನು ಸಮ್ಮೇಳನದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.
‘ಹೂಮನಸಿನ ಹೊಂಗನಸು’ ಕವನ ಸಂಕಲನವನ್ನು ತಹಶೀಲ್ದಾರ್ ವೆಂಕಟ­ರಾಜು ಬಿಡುಗಡೆ ಮಾಡಿದರು. ಸಮ್ಮೇ­ಳನದ ಪ್ರಯುಕ್ತ ‘ರೇಷ್ಮೆ ಊರಲಿ ಸಾಹಿತ್ಯ ತೋರಣ ಸ್ಮರಣ ಸಂಚಿಕೆ ೨೦೧೪’ನ್ನು ಜಿಲ್ಲಾ ಕಸಾಪ ಅಧ್ಯಕ್ಷ ಹುಲಿ­ಕಲ್ ನಟರಾಜ್ ಬಿಡುಗಡೆ ಮಾಡಿದರು.

ಪುಸ್ತಕ ಹಾಗೂ ಕೃಷಿಗೆ ಸಂಬಂಧಿಸಿದ ಮಳಿಗೆಗಳನ್ನು ದೇವನಹಳ್ಳಿ ತಾ.ಪಂ. ಅಧ್ಯಕ್ಷೆ ರಾಧಿಕಾ ತ್ಯಾಗರಾಜು ಉದ್ಘಾ­ಟಿಸಿದರು. ಶಿಕ್ಷಕ ಮುದ್ದಪ್ಪ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದರು. ಸ್ತ್ರೀಶಕ್ತಿ ಸಂಘದ ಮಹಿಳೆಯರು  ವಸ್ತು ಪ್ರದ­ರ್ಶನ ಮತ್ತು ಮಾರಾಟ ಮಳಿಗೆಗಳನ್ನು ತೆರೆದಿದ್ದರು.

ಬೆಂಗಳೂರು ಗ್ರಾಮಾಂ­ತರ ಜಿಲ್ಲಾ ಪಂಚಾಯತ್ ಸದಸ್ಯೆ ನಳಿನಾ ಮುನಿರಾಜು ಸಮ್ಮೇಳನಾ­ಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿ­ದರು. ಕನ್ನಡ ಮತ್ತು ಸಂಸ್ಕೃತಿ ಇಲಾ­ಖೆಯ ವತಿಯಿಂದ ಡೊಳ್ಳು ಕುಣಿತ, ಕಂಸಾಳೆ ನೃತ್ಯ, ರಾಜ್ಯ ಪ್ರಶಸ್ತಿ ವಿಜೇತ ಜಂಗಮ­ಕೋಟೆ ಮರಿಯಪ್ಪ ತಂಡ­ದವರ ವೀರಗಾಸೆ, ಶಾಲಾ ಮಕ್ಕಳು ಪೂರ್ಣ ಕುಂಭದೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷ ನಾಗೇಶ್ ಬೆಟ್ಟಕೋಟೆ ಅವರ ಮೆರ­ವಣಿಗೆ ನಡೆಸಿದರು.

ಹಿಂದಿನ ಸಮ್ಮೇಳನಾಧ್ಯಕ್ಷ ಜಿ.ವಿಜಯ­ಕುಮಾರ್, ಹಾಲಿ ಸಮ್ಮೇಳನಾಧ್ಯಕ್ಷ ನಾಗೇಶ್ ಬೆಟ್ಟಕೋಟೆ ಅವರಿಗೆ ಕನ್ನಡ ಧ್ವಜ ಹಸ್ತಾಂತರಿ­ಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಮುನಿ­ರಾಜು, ಯಲಿಯೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುನಿಯಪ್ಪ, ಉಪಾಧ್ಯಕ್ಷೆ ರತ್ನಮ್ಮ, ಪಂಚಾಯ್ತಿ ಅಭಿ­ವೃದ್ಧಿ ಅಧಿಕಾರಿ ಆನಂದ ಕುಮಾರ್, ವಿಜಯಪುರ ಪುರಸಭೆ ಮುಖ್ಯಾಧಿಕಾರಿ ಮಾರುತಿ ಶಂಕರ್ ಮತ್ತಿತರ ಅಧಿಕಾರಿಗಳು, ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತ­ರಿದ್ದರು.

ಸಂತೃಪ್ತ ಭೋಜನ: ಸಮ್ಮೇಳನದ ಉಪಾಹಾರ ಹಾಗೂ ಊಟದ ವ್ಯವಸ್ಥೆ­ಯನ್ನು ಯಲಿಯೂರು ಗ್ರಾಮ ಪಂಚಾ­ಯ್ತಿ ವಹಿಸಿಕೊಂಡಿತ್ತು.
ಸಾಹಿತ್ಯಾಭಿಮಾನಿಗಳು ಕೇಸರಿ ಬಾತ್, ಪುಲಾವು, ಮುದ್ದೆ, ಬೇಳೆ ಸಾರು, ಪೂರಿ, ಸಾಗು, ಅನ್ನ, ರಸಂ, ಮೊಸರಿನ ರುಚಿ  ಸವಿದರು.
ಸ್ವಾಗತ ಸಮಿತಿಯ ಕೋಶಾಧ್ಯಕ್ಷ ತ್ಯಾಗರಾಜು ಸ್ವಾಗತಿಸಿದರು. ಸಾಂಸ್ಕೃತಿಕ ತಂಡದ ಎಂ.ವಿ.ನಾಯ್ಡು ಮಹಾ­ತ್ಮಾಂಜ­­ನೇಯ, ನಾರಾಯಣ ಸ್ವಾಮಿ ಇತ­ರರು ನಾಡಗೀತೆ, ರೈತಗೀತೆ ಇನ್ನಿತರೆ ಕನ್ನಡಗೀತೆಗಳನ್ನು ಹಾಡಿದರು. ರಂಗ­ಭೂಮಿ ಕಲಾವಿದ ದೇವರಾಜು ನಿರೂ­ಪಿಸಿದರು. ಚನ್ನರಾಯಪಟ್ಟಣ ಹೋಬಳಿ ಕಸಾಪ ಅಧ್ಯಕ್ಷ ವೈ.ಎ.ದೇವರಾಜು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.