ADVERTISEMENT

ನೀರಿಗಾಗಿ ಬೀದಿಗಿಳಿದ ನೀರೆಯರು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 4:45 IST
Last Updated 20 ಆಗಸ್ಟ್ 2012, 4:45 IST

ಆನೇಕಲ್: ಕಾಚನಾಯಕನಹಳ್ಳಿ ದಿಣ್ಣೆಯಲ್ಲಿ  ಕುಡಿವ ನೀರಿಗಾಗಿ ಕೊರೆಯಿಸಲಾಗುತ್ತಿದ್ದ ಕೊಳವೆ ಬಾವಿಯನ್ನು ರಾಜಕೀಯ ಕಾರಣಗಳಿಂದಾಗಿ ಅರ್ಧದಲ್ಲೇ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಸ್ಥಳೀಯ ಮಹಿಳೆಯರು ಬಲವಾಗಿ ಪ್ರತಿಭಟಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಯುತ್ತಿದ್ದ ಲಾರಿಯನ್ನು ಜಿಲ್ಲಾ ಪಂಚಾಯಿತಿ ಸದಸ್ಯರು ರಾಜಕೀಯ ಕಾರಣಗಳಿಂದಾಗಿ ವಾಪಸ್ ಕರೆಯಲು ಯತ್ನಿಸಿದ್ದಾರೆ ಎಂಬ ಸುದ್ದಿ ರಾತ್ರಿ ಕಿವಿ ತಲುಪಿತು. ಕೂಡಲೇ ಮಹಿಳೆಯರು ಮಳೆಯನ್ನು ಲೆಕ್ಕಿಸದೇ ಕೊಡೆ ಹಿಡಿದು ಲಾರಿ ಸುತ್ತುವರಿದು ಪ್ರತಿಭಟನೆ ನಡೆಸಿದರು.

ಕಾಚನಾಯಕನಹಳ್ಳಿ ದಿಣ್ಣೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಗ್ರಾಮದಲ್ಲಿ ನೀರಿನ ಸಮಸ್ಯೆ ನಿವಾರಣೆಗಾಗಿ ಗ್ರಾಮ ಪಂಚಾಯಿತಿ ಸದಸ್ಯ ಕೇಶವರೆಡ್ಡಿ ಮನವಿ ಮೇರೆಗೆ ಕೊಳವೆ ಬಾವಿ ಕೊರೆಯಲು ಲಾರಿ ಬಂದಿತ್ತು.

ಸುಮಾರು 40 ಅಡಿ ಆಳ ಕೊರೆದಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಸದಸ್ಯರು ರಾಜಕೀಯ ಕಾರಣಗಳಿಂದ ಕೊಳವೆ ಬಾವಿ ಕೊರೆಯುವುದನ್ನು ಸ್ಥಗಿತಗೊಳಿಸಿ ಬೇರೆಡೆ ಸ್ಥಳಾಂತರಿಸುವ ಯತ್ನ ನಡೆಸಿದರು. ಇದರಿಂದ ಕುಪಿತರಾದ ಗ್ರಾಮದ ಮಹಿಳೆಯರು ಇಲ್ಲಿಯೇ ಕೊಳವೆ ಬಾವಿ ಕೊರೆಯಿಸಬೇಕು ಎಂದು ಒತ್ತಾಯಿಸಿ, ಲೆಕ್ಕಸಿದೇ, ಖಾಲಿ ಕೊಡ ಮತ್ತು ಕೊಡೆ ಹಿಡಿದು ಪ್ರತಿಭಟನೆ ನಡೆಸಿದರು. ಆಗ ಸ್ಥಳಕ್ಕೆ ಆಗಮಿಸಿದ ಬಮುಲ್ ನಿರ್ದೇಶಕ ಆರ್.ಕೆ.ರಮೇಶ್ ಸಹ ಪ್ರತಿಭಟನಾ ನಿರತರನ್ನು ಬೆಂಬಲಿಸಿ ಮಾತನಾಡಿದರು.
 
`ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಮಾಡಬಾರದು. ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು ಎಂದರು. ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಇಲ್ಲಿಯೇ ಕೊಳವೆ ಬಾವಿ ಕೊರೆಯಬೇಕು~ ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಪಿಎಸ್ಸೈ ಶಶಿಕಿರಣ್ ಹಾಗೂ ಅತ್ತಿಬೆಲೆ ಪೊಲೀಸ್ ವೃತ್ತ ನಿರೀಕ್ಷಕ ವೆಂಕಟ ಶೆಟ್ಟಿ ಆಗಮಿಸಿ ಮಾತುಕತೆ ನಡೆಸಿದರು. ಈ ವೇಳೆಗೆ ದೂರವಾಣಿಯಲ್ಲಿ ಸಂಪರ್ಕಿಸಿದ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರು ಅವಶ್ಯಕತೆ ಇರುವೆಡೆಯಲ್ಲಿ ಕೊಳವೆಬಾವಿ ಕೊರೆಯಿಸುವಂತೆ ಸೂಚಿಸಿದ್ದರಿಂದ ಸಮಸ್ಯೆ ಬಗೆಹರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.