ADVERTISEMENT

ಪರೀಕ್ಷಾ ಕೇಂದ್ರಕ್ಕೆ ಅಕ್ರಮ ಪ್ರವೇಶ: ಶಿಕ್ಷಕರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ದೊಡ್ಡಬಳ್ಳಾಪುರ: ತಾಲ್ಲೂಕಿನ ರಾಜಘಟ್ಟದ ಎಸ್.ಎಸ್.ಎಲ್.ಸಿ  ಪರೀಕ್ಷಾ ಕೇಂದ್ರಕ್ಕೆ ಗುರುವಾರ ನಿಯಮ ಉಲ್ಲಂಘಿಸಿ ಪ್ರವೇಶಿಸಿದ್ದಾರೆ ಎಂಬ ಆರೋಪದ ಮೇಲೆ ಮೂವರು ಖಾಸಗಿ ಪ್ರೌಢ ಶಾಲಾ ಶಿಕ್ಷಕರನ್ನು ಬಂಧಿಸಲಾಗಿದೆ.

ರಾಜಘಟ್ಟದ ಮಾರುತಿ ಪ್ರೌಢಶಾಲೆಯಲ್ಲಿ ಗುರುವಾರ ವಿಜ್ಞಾನ ವಿಷಯದ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ತಾಲ್ಲೂಕಿನ ಕೊನಘಟ್ಟದ ಮಂಜುನಾಥ ಪ್ರೌಢ ಶಾಲೆಯ ಶಿಕ್ಷಕರಾದ ಚಂದ್ರಶೇಖರ್, ಆನಂದ್, ಕಿರಣ್ ಅವರು ನಿಷೇಧಿತ ಪ್ರದೇಶಕ್ಕೆ ಅತಿಕ್ರಮಣ ಪ್ರವೇಶ ಮಾಡಿದ್ದಾರೆ ಎಂದು ಕೇಂದ್ರಕ್ಕೆ ಖುದ್ದು ಭೇಟಿ ನೀಡಿದ್ದ ತಹಸೀಲ್ದಾರ್ ಚಂದ್ರ ಹಾಗೂ ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ವಿ.ವೆಂಕಟೇಶಪ್ಪ ತಿಳಿಸಿದ್ದಾರೆ.

ದುರುದ್ದೇಶ: ಬಂಧಿತರಾಗಿರುವ ಚಂದ್ರಶೇಖರ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿ, ನಮ್ಮ ಬಂಧನ ದುರುದ್ದೇಶದಿಂದ ಕೂಡಿದೆ. ರಾಜಘಟ್ಟ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿದ್ದ ಅಕ್ರಮದ ಬಗ್ಗೆ ನಾವು ವಿರೋಧಿಸಿದ್ದೆವು. ಅಲ್ಲದೆ ಪರೀಕ್ಷಾ ಕೇಂದ್ರದಲ್ಲಿ ಏ.2 ರಂದು ನಡೆದಿದ್ದ ಅಕ್ರಮಗಳು ಕುರಿತು ಲಿಖಿತ ದೂರು ನೀಡಲಾಗಿತ್ತು. ಇದರಿಂದ ಕೋಪಗೊಂಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೆಂಕಟೇಶಪ್ಪ ಅವರು ತಹಶೀಲ್ದಾರ್ ಮೂಲಕ ನಮ್ಮ ಮೇಲೆ ದೂರು ದಾಖಲಿಸಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ನಿಷೇಧಿತ ಪ್ರದೇಶದಿಂದ ದೂರದಲ್ಲೇ ಇದ್ದರು ಸಹ ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನೀಡಿರುವ ಲಿಖಿತ ದೂರಿನಲ್ಲಿ ವಿದ್ಯಾರ್ಥಿಗು ತಿಳಿಸಿರುವಂತೆ `ಏ.2ರಂದು (ಸೋಮವಾರ) ನಡೆದ ಕನ್ನಡ ವಿಷಯದ ಪರೀಕ್ಷೆಯಲ್ಲಿ, ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾಗಿದ್ದ ಕೆ.ವೆಂಕಟೇಶ್,ಲಕ್ಷ್ಮೀನಾರಾಯಣ್ ಇವರು ಉತ್ತರಗಳನ್ನು ಒಳಗೊಂಡ ಚೀಟಿಗಳನ್ನು ತಂದು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಪರೀಕ್ಷಾ ಪಾವಿತ್ರ್ಯತೆ ಹಾಳುಮಾಡಿರುತ್ತಾರೆ.
 
ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು ಬೇರೆ ವಿಷಯಗಳ ಪರೀಕ್ಷೆ ಬರೆಯಲು ಬೇಸರವಾಗಿದೆ. ಅದುದ್ದರಿಂದ ಈ ಶಿಕ್ಷಕರನ್ನು ಬೇರೆ ವಿಷಯಗಳ ಪರೀಕ್ಷೆಗೆ ತೆಗೆದುಕೊಳ್ಳದೆ ಕೈಬಿಡಬೇಕು. ಇಲ್ಲವಾದರೆ ಶಿಕ್ಷಣ ಸಚಿವರಿಗೆ ಲಿಖಿತ ದೂರು ನೀಡಲಾಗುವುದು. ಅಲ್ಲದೆ ರಾಜಘಟ್ಟ ಪರೀಕ್ಷಾ ಕೇಂದ್ರಕ್ಕೆ ವಿಶೇಷ ಜಾಗೃತ ದಳವನ್ನು ನೇಮಕ ಮಾಡುವಂತೆ~ ರಾಜಘಟ್ಟ ಪರೀಕ್ಷಾ ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ 28 ವಿದ್ಯಾರ್ಥಿಗಳು ಸಹಿ ಮಾಡಿರುವ ದೂರಿನ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನೀಡಲಾಗಿತ್ತು.

ಸ್ಪಷ್ಟನೆ: ರಾಜಘಟ್ಟ ಶಾಲೆಯಲ್ಲಿ ನಕಲು ನಡೆಯಲು ಸಹಕರಿಸುತ್ತಿದ್ದಾರೆ ಎಂದು ದೂರುಗಳ ಬಂದ ಹಿನ್ನೆಲೆಯಲ್ಲಿ ಶಿಕ್ಷಕರಾದ ಕೆ.ವೆಂಕಟೇಶ್,ಲಕ್ಷ್ಮೀನಾರಾಯಣ್ ಅವರನ್ನು ರಾಜಘಟ್ಟ ಪರೀಕ್ಷಾ ಕೇಂದ್ರದಿಂದ ಬೇರೆ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾ ಸರ್ವಜನಿಕ ಉಪನಿರ್ದೇಶಕರ ಆದೇಶದ ಮೇಲೆ ಬದಲಾವಣೆ ಮಾಡಲಾಗಿದೆ ಎಂದು ತಾಲ್ಲೂಕು ಪರೀಕ್ಷಾ ನಿರ್ವಾಹಕ ಜಿ.ರಾಮಚಂದ್ರ ಸ್ಪಷ್ಟನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.