ADVERTISEMENT

'ಪ್ರವಾಸ ಭಾಗ್ಯ' ಸದುಪಯೋಗಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 5:58 IST
Last Updated 29 ಅಕ್ಟೋಬರ್ 2017, 5:58 IST

ದೇವನಹಳ್ಳಿ: ಸರ್ಕಾರ ಸರ್ಕಾರಿ ಪ್ರೌಢಶಾಲೆ  ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನದ ಕಾರ್ಯಕ್ರಮದಡಿ ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ಭಾಗ್ಯ ಕಲ್ಪಿಸಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಪಿಳ್ಳಮುನಿ ಶಾಮಪ್ಪ ಸಲಹೆ ನೀಡಿದರು.

ದೇವನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗ ವಿದ್ಯಾರ್ಥಿಗಳಿಗೆ ಪ್ರವಾಸದ ಉಚಿತ ಕಿಟ್ ವಿತರಿಸಿ ಅವರು ಮಾತನಾಡಿದರು. ರಾಜ್ಯದ ಇತಿಹಾಸ, ಭೌಗೋಳಿಕ ವಿಸ್ತೀರ್ಣ, ಕೈಗಾರಿಕಾ ಕ್ಷೇತ್ರ, ಅಣೆಕಟ್ಟುಗಳ ಬಗ್ಗೆ ವಿದ್ಯಾರ್ಥಿಗಳು ಪುಸ್ತಕದಲ್ಲಿ ನೋಡುವುದಕ್ಕಿಂತ ಖುದ್ದು ವೀಕ್ಷಣೆ ಮಾಡಿದರೆ ಸ್ವಷ್ಟ ಮಾಹಿತಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದರು.

ದಶಕಗಳ ಹಿಂದೆ ಮಕ್ಕಳು ಪ್ರವಾಸ ಹೋಗುವುದು ದುಸ್ತರವಾಗಿತ್ತು. ಈ ಹಿಂದೆ ಒಂದು ದಿನದ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ಹೊರಸಂಚಾರವೆಂದು ಶಿಕ್ಷಕರು ಕರೆದುಕೊಂಡು ಹೋಗುತ್ತಿದ್ದರು. ಈಗ ಸರ್ಕಾರ ಪ್ರವಾಸ ಯೋಜನೆಮೂಲಕ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮುಂದಾಗಿದೆ. ಪ್ರವಾಸದ ಸಂದರ್ಭದಲ್ಲಿ ಮಕ್ಕಳು ನೀರಿಗೆ ಇಳಿಯಬಾರದು. ಸೆಲ್ಫಿಯಂತಹ ಹವ್ಯಾಸಕ್ಕೆ ಮುಂದಾಗಬಾರದು ಎಂದು ಕಿವಿಮಾತು ಹೇಳಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಮಾತನಾಡಿ, ಒಟ್ಟು ಐದು ದಿನಗಳ ಪ್ರವಾಸದಲ್ಲಿ ಚಿತ್ರದುರ್ಗ ಕೋಟೆ, ಮುರುಘಾಮಠ, ಹೊಸಪೇಟೆ ತುಂಗಭದ್ರ ಅಣೆಕಟ್ಟು, ಕೂಡಲ ಸಂಗಮ, ಗೋಲ್ ಗುಂಬಜ್, ಆಲಮಟ್ಟಿ ಅಣೆಕಟ್ಟು ಮತ್ತು ಸಂಗೀತ ಕಾರಂಜಿ, ಐಹೊಳೆ ಪಟ್ಟದಕಲ್ಲು, ಬಾದಾಮಿ, ಮಹಾಕೂಟ, ಗಜೇಂದ್ರಗಡ, ವಾಣಿವಿಲಾಸ ಸಾಗರ ಮಕ್ಕಳಿಗೆ ವೀಕ್ಷಣೆಗೆ ಅವಕಾಸವಿದೆ. ಒಟ್ಟು 1500 ಕಿ.ಮೀ.ಪ್ರವಾಸಕ್ಕೆ ಎರಡು ತಂಡದಲ್ಲಿ ನಾಲ್ಕು ಬಸ್ ನಲ್ಲಿ 194 ವಿದ್ಯಾರ್ಥಿಗಳು ತೆರಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಟಿಶರ್ಟ್, ತಲೆಗೆ ಕ್ಯಾಪ್, ಜತೆಗೆ ಪ್ರವಾಸಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಪರಿಕರವುಳ್ಳ ಕಿಟ್ ನೀಡಲಾಗಿದೆ ಎಂದು ಅವರು ಹೇಳಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್, ಕಾರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್, ಸಂಪನ್ಮೂಲ ವ್ಯಕ್ತಿಗಳಾದ ನೀಲಕಂಠ ಗಾವಂಕರ್, ಆದರ್ಶ, ಲಕ್ಷ್ಮಿ ನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.