ADVERTISEMENT

ಬಾಲಕಿ ಹತ್ಯೆ ಆರೋಪ: ಇಬ್ಬರಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 10:07 IST
Last Updated 1 ಆಗಸ್ಟ್ 2013, 10:07 IST

ಆನೇಕಲ್: ದುರುದ್ದೇಶದಿಂದ 13 ವರ್ಷದ ಬಾಲಕಿಯನ್ನು ಹತ್ಯೆ ಮಾಡಿ ಬೆಂಕಿ ಹಚ್ಚಿದ್ದ ಆರೋಪದ ಮೇಲೆ ಒಂದೇ ಕುಟುಂಬದ ಇಬ್ಬರು ಸದಸ್ಯರಿಗೆ ಜೀವಾವಧಿ ಹಾಗೂ ಅದೇ ಕುಟುಂಬದ ಇನ್ನಿಬ್ಬರು ಆರೋಪಿಗಳಿಗೆ ತಲಾ 6 ವರ್ಷಗಳ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ಇಲ್ಲಿನ ನ್ಯಾಯಾಲಯ ಬುಧವಾರ ಆದೇಶ ನೀಡಿದೆ.

ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿ.ವಿ.ಮಲ್ಲಾಪುರ್ ಬುಧವಾರ ಪ್ರಕರಣ ಕುರಿತಂತೆ ಆದೇಶ ಪ್ರಕಟಿಸಿದರು.

ಹೆಬ್ಬಗೋಡಿ ವಾಸಿ ಗಾರ್ಮೆಂಟ್ಸ್ ಉದ್ಯೋಗಿ ತುಳಸಿ ಮತ್ತು ಆಕೆಯ ಸಹೋದರ ನಾಗಿರೆಡ್ಡಿಗೆ ಜೀವಾವಧಿ ಶಿಕ್ಷೆ, ತಲಾ 1.25 ಲಕ್ಷ ರೂ ದಂಡ, ತುಳಸಿಯ ತಾಯಿ ಅನಂತಮ್ಮ ಹಾಗೂ ಅನಂತಮ್ಮನ ಪತಿ ಶಿವಾರೆಡ್ಡಿಗೆ 6 ವರ್ಷಗಳ ಕಠಿಣ ಶಿಕ್ಷೆ, ತಲಾ 25 ಸಾವಿರ ರೂ ದಂಡ ವಿಧಿಸಲಾಗಿದೆ. ದಂಡದ ಮೊತ್ತ 2.50 ಲಕ್ಷ ರೂಗಳನ್ನು ಪರಿಹಾರ ರೂಪದಲ್ಲಿ ಹತ್ಯೆಯಾದ ಕವಿತಾಳ ತಾಯಿ ಗೌರಮ್ಮ ಹಾಗೂ ಆಕೆಯ ತಂದೆ ಲೋಕೇಶ್‌ಗೆ ನೀಡುವಂತೆ ಆದೇಶಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಗೋವಿಂದ ರೆಡ್ಡಿ ಈಗಾಗಲೇ ಮೃತಪಟ್ಟಿದ್ದಾನೆ.

2009ರಲ್ಲಿ ಪ್ರಕರಣ ನಡೆದಿತ್ತು. ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 38 ಮಂದಿಯ ವಿಚಾರಣೆ ನಡೆಸಲಾಗಿತ್ತು. ಸರ್ಕಾರಿ ವಕೀಲರಾದ ವಾಗೀಶ ವಿ.ಹಿರೇಮಠ್ ಮತ್ತು ಎಸ್.ಟಿ.ಬಿಕ್ಕಣ್ಣನವರ್ ವಾದ ಮಂಡಿಸಿದ್ದರು.
 
ತಾತ್ಕಾಲಿಕ ಸರ್ಕಾರಿ ವಕೀಲರಾಗಿ ಸ್ಥಳೀಯ ಹಿರಿಯ ವಕೀಲರೂ ಆದ ಎಸ್.ಸಂಪತ್‌ಕುಮಾರ್ ಅವರೂ ವಾದ ಮಂಡಿಸಿದ್ದರು.
ನ್ಯಾಯಾಲಯದ ಆದೇಶ ಹೊರಬಿದ್ದ ನಂತರ ಕೋರ್ಟ್ ಹಾಲ್‌ನಿಂದ ಹೊರಬಂದ ತುಳಸಿ ಹಾಗೂ ಆಕೆಯ ತಾಯಿ ಪರಸ್ಪರ ವಾಚಾಮಗೋಚರವಾಗಿ ಬೈದಾಡಿಕೊಂಡರು. `ಎಲ್ಲವೂ ನಿನ್ನಿಂದಲೇ ಆಗಿದ್ದು' ಎಂದು ಒಬ್ಬರಿಗೊಬ್ಬರು ನಿಂದಿಸಿಕೊಂಡರು.
`ತಪ್ಪಿತಸ್ಥರಿಗೆ ಶಿಕ್ಷೆಯಾಗಿದ್ದು ನಮಗೆ ನ್ಯಾಯ ಸಿಕ್ಕಿದೆ. ನಮ್ಮ ಹುಡುಗಿಯ ಆತ್ಮಕ್ಕೆ ಶಾಂತಿ ದೊರೆತಿದೆ' ಎಂದು ಮೃತ ಕವಿತಾಳ ಪೋಷಕರು ಕಂಬನಿ ಮಿಡಿದರು.

ಹಿನ್ನೆಲೆ: ತನ್ನ ಸೋದರ ಸಂಬಂಧಿಗಳ ಮೇಲೆ ಹಗೆ ತೀರಿಸಿಕೊಳ್ಳಲು ತುಳಸಿ ತನ್ನದೇ ಕುಟುಂಬದವರ ನೆರವು ಪಡೆದು ನೆರೆಮನೆಯಲ್ಲಿ ವಾಸವಿದ್ದ ಬಾಲಕಿ ಕವಿತಾಳನ್ನು ಹತ್ಯೆ ಮಾಡಿ ಪೆಟ್ಟಿಗೆಯಲ್ಲಿ ತುರುಕಿ ಬೆಂಕಿ ಹಚ್ಚಿದ ಆರೋಪ ಎದುರಿಸುತ್ತಿದ್ದಳು. ಹಣಕಾಸಿನ ವಿಚಾರದಲ್ಲಿ ಎರಡೂ ಕುಟುಂಬಗಳಿಗೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದೇ ಘಟನೆಗೆ ಕಾರಣ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.