ADVERTISEMENT

ಬಿಜೆಪಿಯಲ್ಲಿ ಭಿನ್ನಮತ ಇಲ್ಲ: ನರಸಿಂಹಸ್ವಾಮಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2015, 9:46 IST
Last Updated 20 ಜನವರಿ 2015, 9:46 IST

ದೊಡ್ಡಬಳ್ಳಾಪುರ: ‘ತಾಲ್ಲೂಕು ಬಿಜೆಪಿ ನಾಯಕರಲ್ಲಿದ್ದ ಭಿನ್ನಾ­ಭಿಪ್ರಾಯಗಳನ್ನು ಸರಿಪಡಿಸಲಾಗಿದೆ. ಕುಟುಂಬದಲ್ಲಿ ಅಣ್ಣ ತನ್ನ ತಮ್ಮಂದಿರನ್ನು ದಂಡಿಸುವ ಅಧಿಕಾರವಿದೆ. ಅಂತೆಯೇ ನಾನು ನನ್ನ ಹಿಂಬಾಲಕರು ತಪ್ಪು ಮಾಡಿದಾಗ ತಿದ್ದಿದ್ದೇನೆ. ಇಲ್ಲಿ ಭಿನ್ನಾಭಿಪ್ರಾಯಗಳಿವೆ ಆದರೆ ಭಿನ್ನಮತ ಇಲ್ಲ’ ಎಂದು ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಹೇಳಿದರು.

ನಗರದಲ್ಲಿ ಸೋಮವರ ನಡೆದ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಕುರಿತ ಕಾರ್ಯಾಗಾರ ಉದ್ಘಾಟಿಸಿ  ಮಾತನಾಡಿದರು.
‘ಪಕ್ಷ ಎನ್ನುವುದು ಒಂದು ಕುಟುಂಬ ಇದ್ದಂತೆ. ಕುಟಂಬದ ಸದಸ್ಯ­ರಲ್ಲಿ ಜಗಳ, ಮನಸ್ತಾಪಗಳು ಸಹಜ. ಇತ್ತೀಚೆಗೆ ಮಧುರೆ ಹೋಬಳಿ­ಯಲ್ಲಿ ನಡೆದ ಮುಖಂಡರ ನಡುವಿನ ಜಗಳ ಕುರಿ­ತಂತೆ ಕಾರ್ಯಕರ್ತರು ಪಕ್ಷದ ಒಗ್ಗಟ್ಟಿನ ಬಗ್ಗೆ ಸಂಶಯ ಪಟ್ಟಿರುವುದು ಸಹಜ. ಆದರೆ ಈ ವಿಚಾರಗಳು ಈಗ ಬಗೆಹರಿ­ದಿವೆ’ ಎಂದರು.

‘ಮುಂದಿನ ಸಹಕಾರ ಸಂಘಗಳ ಹಾಗೂ ಪಂಚಾಯಿತಿ ಚುನಾ­ವಣೆಗಳಲ್ಲಿ ಬಿಜೆಪಿ ಪಕ್ಷ ಬಹುಮತ ಗಳಿಸುವುದು ನಿಶ್ಚಿತ­ವಾ­ಗಿದೆ. ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯ ಇಲ್ಲ’ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿರುವ ಅಕ್ರಮ ಡಿನೊಟಿಫಿಕೇಷನ್ ಪ್ರಕರಣದ ದಾಖಲೆಗಳನ್ನು ಬಿಜೆಪಿ ನಾಯಕರು ಬಿಡುಗಡೆ ಮಾಡಲಿದ್ದಾರೆ. ಸರ್ಕಾರ ಯಾವ ಕ್ಷಣದಲ್ಲಾದರೂ ಬೀಳಬಹುದು ಎಂದು ಭವಿಷ್ಯ ನುಡಿದರು.


ತಾಲ್ಲೂಕಿನಲ್ಲಿ ಬಿಜೆಪಿ ಪಕ್ಷ ಸದೃಢವಾಗಿದೆ. ೨೬ ಗ್ರಾಮ ಪಂಚಾಯಿತಿಗಳಲ್ಲಿ, ೧೬ ಪಂಚಾಯಿತಿಗಳಲ್ಲಿ ಬಿಜೆಪಿ ಆಡಳಿತ­ವಿದೆ. ತಾಲ್ಲೂಕು ಹಾಗೂ ಜಿ.ಪಂ.ಗಳಲ್ಲಿ ಬಿಜೆಪಿ ಪಕ್ಷದ ಸದ­ಸ್ಯರು ಹೆಚ್ಚಿದ್ದಾರೆ. ಮುಂದೆಯೂ ಎಲ್ಲ ಪಂಚಾ­ಯಿತಿ­ಗಳಲ್ಲೂ ಕಡೆಯಲ್ಲಿಯೂ ಬಿಜೆಪಿ ಆಳ್ವಿಕೆಯೇ ತಾಲ್ಲೂಕಿನಲ್ಲಿ ಬರಲಿದೆ.

ಕಾರ್ಯಕರ್ತರು ಪ್ರತಿ ಬೂತ್ ಮಟ್ಟದಲ್ಲಿ ೨೦೦ಕ್ಕೂ ಹೆಚ್ಚು ಸದಸ್ಯರ ನೋಂದಣಿ ಮಾಡಿಸುವಲ್ಲಿ ಶ್ರಮಿಸಬೇಕು.  ಸದಸ್ಯತ್ವದ ಸಂಖ್ಯೆ ಒಂದು ಲಕ್ಷ ಮುಟ್ಟಬೇಕು ಎಂದರು.

ಜಿ.ಪಂ. ಸದಸ್ಯ ಎನ್. ಹನುಮಂತೇಗೌಡ ಮಾತನಾಡಿ, ಮಾರ್ಚ್ ೩೧ರವರೆಗೆ ಅಭಿಯಾನ ನಡೆಯಲಿದ್ದು, ನಗರದಲ್ಲಿ ೬೮ ಬೂತ್‌ಗಳಿಗೆ ೧೫೮ ಕಾರ್ಯಕರ್ತರು ಹಾಗೂ ಗ್ರಾಮಾಂ­ತರ­ದಲ್ಲಿ ೧೭೬ ಬೂತ್‌ಗಳಿಗೆ ೪೬೩ ಕಾರ್ಯಕರ್ತರು ನಿಯೋ­ಜನೆಗೊಂಡಿದ್ದಾರೆ. ೯ ಸಾವಿರ ಸದಸ್ಯತ್ವ ಮಾಡಲಾಗಿದೆ ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಭಾರಿ ಸಚ್ಚಿದಾನಂದ,  ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಸಿ. ನಾರಾಯಣಸ್ವಾಮಿ, ಬಿಜೆಪಿ ಹಿರಿಯ ಮುಖಂಡ ಕೆ.ಎಂ. ಹನುಮಂತರಾಯಪ್ಪ, ತಾಲ್ಲೂಕು ಅಧ್ಯಕ್ಷ ಎಂ. ಅಶ್ವತ್ಥ­ನಾರಾಯಣ­ಗೌಡ, ಕಾರ್ಯದರ್ಶಿ ನಾಗರಾಜು,  ನಗರಾಧ್ಯಕ್ಷ ಎಚ್.ಎಸ್. ಶಿವಶಂಕರ್, ನಗರಸಭಾ ಸದಸ್ಯ ನಂಜಪ್ಪ, ಡಿ.ಎಂ. ಚಂದ್ರಶೇಖರ್, ವೆಂಕಟರಾಜು, ಕೆ.ಬಿ.ಮುದ್ದಪ್ಪ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಶಿವಶಂಕರ್, ಬಿಜೆಪಿ ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷೆ ವತ್ಸಲಾ, ಸದಸ್ಯ ನೋಂದಣಿ ತಾಲ್ಲೂಕು ಪ್ರಮುಖ ರಾಮಮೂರ್ತಿ, ಮುಖಂಡರಾದ ಡಿ.ವಿ. ನಾರಾಯಣಶರ್ಮ, ಪ್ರಸನ್ನಕುಮಾರ್, ಗೋಪಿ, ಮೋಹನ್‌ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT