ಆನೇಕಲ್: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪರವಾದ ಅಲೆಯಿಂದಾಗಿ ಸೋಲಿನ ಭೀತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಹಲವಾರು ಸಚಿವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.
ಅವರು ತಾಲ್ಲೂಕಿನ ಚಂದಾಪುರ ಮತ್ತು ಆನೇಕಲ್‌ಗಳಲ್ಲಿ ರೋಡ್ ಶೋ ಮೂಲಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಅವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.
‘ಸಚಿವರಾದ ಕೃಷ್ಣಭೈರೇಗೌಡ, ಪ್ರಕಾಶ್ ಹುಕ್ಕೇರಿ ಮತ್ತು ಎಚ್.ಆಂಜನೇಯ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷ ತಂತ್ರ ರೂಪಿಸಿತ್ತು. ಆದರೆ ಬಿಜೆಪಿಯ ಅಲೆಯಿಂದಾಗಿ ಸೋಲುವ ಭೀತಿಯಿಂದಾಗಿ ಇವರು ಚುನಾವಣೆಯಿಂದ ದೂರ ಉಳಿದಿದ್ದಾರೆ’ ಎಂದರು.
ರಾಜ್ಯದಲ್ಲಿ ಜನತೆ 22 ಕ್ಕೂ ಹೆಚ್ಚು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮೋದಿ ಪ್ರಧಾನಿಯಾಗಲು ಕರ್ನಾಟಕದ ಜನತೆ ಕೊಡುಗೆ ನೀಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಹಿರಿಯ ಮುಖಂಡ ಎ.ನಾರಾಯಣಸ್ವಾಮಿ ಹಾಗೂ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಮಾತನಾಡಿದರು.
ಚಂದಾಪುರದಿಂದ ಆನೇಕಲ್‌ಗೆ ಬರುವ ದಾರಿಯುದ್ದಕ್ಕೂ ಇಗ್ಗಲೂರು, ಮರಸೂರು, ಬ್ಯಾಗಡದೇನಹಳ್ಳಿ, ಕಾವಲಹೊಸಹಳ್ಳಿ ಬಳಿ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಮುಖಂಡರನ್ನು ಬರಮಾಡಿಕೊಂಡರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಜಿ.ಆಂಜಿನಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಮ್ಜದ್ ಪಾಷ ಮತ್ತಿತರರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.