ADVERTISEMENT

ಬೆಂಗಳೂರು–ಹೈದರಾಬಾದ್‌ ಸಾಧನೆ ಅನನ್ಯ

ಕೆೇಂದ್ರ ಜವಳಿ ಸಚಿವ ಡಾ.ಕೆ.ಸಾಂಬಶಿವರಾವ್ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 10:34 IST
Last Updated 24 ಡಿಸೆಂಬರ್ 2013, 10:34 IST

ದೊಡ್ಡಬಳ್ಳಾಪುರ: ಇಂದಿನ ಜಾಗತಿಕ ಸವಾಲುಗಳಿಗೆ ಪೂರಕವಾಗಿ ಯುವ ಸಮೂಹ ತನ್ನ ಬೌದ್ಧಿಕ ಮಟ್ಟವನ್ನು ಉನ್ನತೀಕರಣಗೊಳಿಸುವ ಕಡೆ ಆದ್ಯತೆ ನೀಡಬೇಕಿದೆ ಎಂದು ಕೇಂದ್ರ ಜವಳಿ ಸಚಿವ ಡಾ.ಕೆ.ಸಾಂಬಶಿವರಾವ್ ತಿಳಿಸಿದರು.


ಸಮೀಪದ ಗೀತಂ ವಿಶ್ವವಿದ್ಯಾಲಯದ ಆವರಣದಲ್ಲಿರುವ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು, ಹೈದರಾಬಾದ್ ಕಡೆ ಜಗತ್ತು ಕಣ್ಣು ಹಾಯಿಸುತ್ತಿದೆ ಎಂದರೆ ಅದಕ್ಕೆ ಇಲ್ಲಿನವರ ಸಾಧನೆಯೇ ಕಾರಣವಾಗಿದೆ.ಇಂದಿನ ಜಾಗತಿಕ ಮಟ್ಟದ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ಬೌದ್ಧಿಕತೆಗೆ ನಮ್ಮ ಶಿಕ್ಷಣ ವ್ಯವಸ್ಥೆ ಪೂರಕವಾಗಿರಬೇಕಿದೆ  ಎಂದರು.

ಗೀತಂ ವಿಶ್ವವಿದ್ಯಾನಿಲಯದ ಅಧ್ಯಕ್ಷ ಡಾ.ಎಂ.ವಿ.ವಿ.ಎಸ್ ಮೂರ್ತಿ ಮಾತನಾಡಿ,  ಗೀತಂ ವಿಶ್ವವಿದ್ಯಾನಿಲಯ ಭಾರತದ ಮುಂಚೂಣಿಯ ವಿವಿಗಳಲ್ಲಿ ಒಂದೆನಿಸಿದೆ.  ಸ್ವಾಯತ್ತ ವಿವಿಯಾಗಿರುವ ಗೀತಂ ವಿಶ್ವವಿದ್ಯಾನಿಲಯದಲ್ಲಿ ೧೮೦ ಕಾರ್ಯ ಯೋಜನೆಗಳನ್ನು ರೂಪಿಸಿದ್ದು, ೧೧೮ ಕಾರ್ಯಯೋಜನೆಗಳು ತಾಂತ್ರಿಕತೆ ವಿಜ್ಞಾನ, ಫಾರ್ಮಸಿ, ವ್ಯವಹಾರ ನಿರ್ವಹಣೆ ಮೊದಲಾದವುಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಸುಂದರ ಪರಿಸರ, ಸುಸಜ್ಜಿತ ಕಟ್ಟಡ ಹಾಗೂ ಮೂಲ ಸೌಕರ್ಯ ಹೊಂದಿದ ಉತ್ತಮ ಹಾಸ್ಟೆಲ್ ಸೌಲಭ್ಯಗಳು ಇಲ್ಲಿವೆ. ಬಿ.ಟೆಕ್‌ಗೆ ಕರ್ನಾಟಕ ಸರ್ಕಾರದ ನಿಯಮದಂತೆ ಶೇ.೨೫ ಸೀಟುಗಳನ್ನು ಸ್ಥಳೀಯರಿಗೆ ಮೀಸಲಿರಿಸಲಾಗಿದೆ ಎಂದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ,ಉನ್ನತ ವ್ಯಾಸಂಗಕ್ಕಾಗಿ ಬೇರೆಡೆ ತೆರಳುವ ಇಲ್ಲಿನ ವಿದ್ಯಾಥಿಗಳ ಅಗತ್ಯಗಳನ್ನು ಗೀತಂ ವಿಶ್ವವಿದ್ಯಾನಿಲಯ  ಪೂರೈಸಲು ಸಜ್ಜಾಗಿರುವುದು ಸಂತಸದ ಸಂಗತಿಯಾಗಿದೆ ವಿಶ್ವವಿದ್ಯಾನಿಲಯದಲ್ಲಿ ಸ್ಥಳೀಯರಿಗೆ ಅರ್ಹತೆ ಮೇರೆಗೆ ಉದ್ಯೋಗ ಹಾಗೂ ಭೂಮಿ ನೀಡಿದ ರೈತರ ಮಕ್ಕಳಿಗೆ ಉಚಿತ ಸೀಟುಗಳನ್ನು ನೀಡಬೇಕಿದೆ ಎಂದರು.

ಮಾಜಿ ಕೇಂದ್ರ ಸಚಿವ ಡಾ.ಬಿ.ಬಿ.ರಾಮಯ್ಯ, ಗೀತಂ ವಿಶ್ವವಿದ್ಯಾಲಯ ಉಪಕುಲಪತಿ ಜಿ.ಸುಬ್ರಹ್ಮಣ್ಯಂ, ಅಧ್ಯಕ್ಷ ಡಾ.ಎಂ.ವಿ.ವಿ.ಎಸ್ ಮೂರ್ತಿ ಜಿ.ಪಂ ಉಪಾಧ್ಯಕ್ಷ ಎನ್.ಹನುಮಂತೇಗೌಡ, ಬೆಂಗಳೂರು ತಾಂತ್ರಿಕ ಕಾಲೇಜಿನ ನಿರ್ದೇಶಕ ಪ್ರೊ.ವಿಜಯಭಾಸ್ಕರ ರಾಜು ಮತ್ತಿತರರು ಭಾಗವಹಿಸಿದ್ದರು.

ಜಿ.ಎಸ್.ಎಸ್‌ ಗೆ ಶ್ರದ್ಧಾಂಜಲಿ
ಸಮಾರಂಭದಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT