ದೊಡ್ಡಬಳ್ಳಾಪುರ: ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಸೃಜನಶೀಲ ಚಟುವಟಿಕೆಗಳನ್ನು ಉತ್ತೇಜಿಸುತ್ತವೆ ಎಂದು ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದರುಭಗವಾನ್ ಬುದ್ಧ ಸಮುದಾಯ ಅಭಿವೃದ್ಧಿ ಟ್ರಸ್ಟ್ ಉಚಿತವಾಗಿ ಏರ್ಪಡಿಸಿದ್ದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಬೇಸಿಗೆ ಶಿಬಿರಗಳು ಹಣ ಸುಲಿಯುವ ದಂದೆಗಳಾಗಿರುವ ಇಂದಿನ ದಿನಗಳಲ್ಲಿ ಉಚಿತವಾಗಿ ಶಿಬಿರಗಳನ್ನು ನಡೆಸುವ ಮೂಲಕ ಬಡವರ ಮಕ್ಕಳಿಗೂ ಅವಕಾಶಗಳನ್ನು ಕಲ್ಪಿಸಬೇಕಿದೆ. ಜಾಗತೀಕರಣದ ಇಂದಿನ ಸಂದರ್ಭದಲ್ಲಿ ದೇಶದ ಸಂಸ್ಕೃತಿಯನ್ನು ಹಾಳು ಮಾಡುವುದು ಯುದ್ದಕ್ಕಿಂತಲೂ ಭೀಕರವಾಗಿದೆ. ದ್ವಂದ್ವ ಜೀವನಮೌಲ್ಯಗಳ ಕಾಲದಲ್ಲಿ ಮಕ್ಕಳಿಗೆ ನೈತಿಕತೆ ಕಲಿಸುವ ತುರ್ತು ಹೆಚ್ಚಾಗಿದೆ ಎಂದರು.
ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ನಾವು ಉನ್ನತೀಕರಿಸಬೇಕೆಂಬ ಹಟವಿದ್ದಲ್ಲಿ ಮಕ್ಕಳ ಕ್ರಿಯಾಶೀಲತೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಪಠ್ಯೇತರ ಚಟುವಟಿಕೆಗಳಿಗೆ ಸಹ ಹೆಚ್ಚಿನ ಉತ್ತೇಜನ ನೀಡುವುದು ಅಗತ್ಯವಾಗಿದೆ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಿ.ಹನುಮಂತರಾಯಪ್ಪ ಅಧ್ಯಕ್ಷತೆವಹಿಸಿದ್ದರು. ಬಿರ್ಲಾ ಸೂಪರ್ ಕಾರ್ಖಾನೆಯ ಮಂಜುನಾಥ್, ಉಪನ್ಯಾಸಕ ಹುಲಿಕುಂಟೆ ಮೂರ್ತಿ, ಟ್ರಸ್ಟ್ ಅಧ್ಯಕ್ಷೆ ಜಿ.ಸವಿತಾ, ಕಾರ್ಯದರ್ಶಿ ರಾಜುಸಣ್ಣಕ್ಕಿ, ನಾಗೇಂದ್ರ ಮತ್ತಿತರರು ಭಾಗವಹಿಸಿದ್ದರು. ಸಮಾರಂಭದಲ್ಲಿ ಬೇಸಿಗೆ ಶಿಬಿರದಲ್ಲಿ ಭಾಗವಹಿಸ್ದಿದ ವಿದ್ಯಾರ್ಥಿಗಳು ಕಲಿತ ನಾಟಕ ‘ಕತ್ತಲೆ ರಾಜ್ಯದಲ್ಲಿ ಮೂರ್ಖ ರಾಜ’ ಪ್ರದರ್ಶನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.