ADVERTISEMENT

ಭುಗಿಲೆದ್ದ ಅಸಮಾಧಾನದ ಕಿಡಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 12:01 IST
Last Updated 14 ಜೂನ್ 2017, 12:01 IST
ದೇವನಹಳ್ಳಿಯ ತಾಲ್ಲೂಕು ಒಕ್ಕಲಿಗರ ಸಂಘದ ಕಚೇರಿ ಆವರಣದಲ್ಲಿ  ಮಂಗಳವಾರ ಆಕ್ರೋಶಗೊಂಡ ‘ಹಾಪ್‌ಕಾಮ್ಸ್’ ಉಪಾಧ್ಯಕ್ಷ ಬಿ.ಮುನೇಗೌಡ ಗುರುತಿನ ಚೀಟಿ ವಿತರಣಾ ಬ್ಯಾನರ್‌ ತೆಗೆದು ಹಾಕಿದರು
ದೇವನಹಳ್ಳಿಯ ತಾಲ್ಲೂಕು ಒಕ್ಕಲಿಗರ ಸಂಘದ ಕಚೇರಿ ಆವರಣದಲ್ಲಿ ಮಂಗಳವಾರ ಆಕ್ರೋಶಗೊಂಡ ‘ಹಾಪ್‌ಕಾಮ್ಸ್’ ಉಪಾಧ್ಯಕ್ಷ ಬಿ.ಮುನೇಗೌಡ ಗುರುತಿನ ಚೀಟಿ ವಿತರಣಾ ಬ್ಯಾನರ್‌ ತೆಗೆದು ಹಾಕಿದರು   

ದೇವನಹಳ್ಳಿ: ಇಲ್ಲಿಯ ತಾಲ್ಲೂಕು ಒಕ್ಕಲಿಗರ ಸಂಘದ ಕಚೇರಿ ಆವರಣದಲ್ಲಿ ಮಂಗಳವಾರ ಏಕಾಏಕಿ ಸಿಟ್ಟಿಗೆದ್ದ ‘ಹಾಪ್‌ಕಾಮ್ಸ್’ ಉಪಾಧ್ಯಕ್ಷ ಬಿ. ಮುನೇಗೌಡ ಬ್ಯಾನರ್‌ ತೆಗೆದುಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಅವರು, ‘ಬೆಂಗಳೂರು ಮತ್ತು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ರಾಜ್ಯ ಒಕ್ಕಲಿಗ ಸಂಘದಲ್ಲಿ ನಾನು ಸೇರಿದಂತೆ 15 ಸದಸ್ಯರಿದ್ದೇವೆ. ರಾಜ್ಯ ಮಟ್ಟದ ಒಕ್ಕಲಿಗರ ಸಂಘ ಅಸ್ತಿತ್ವಕ್ಕೆ ಬಂದಾಗಿನಿಂದ ಸಂಘದ ವತಿಯಿಂದ ಈವರೆಗೂ ಬಿಡಿಗಾಸು ನೀಡಿಲ್ಲ’ ಎಂದರು.

‘ಪ್ರತಿ ವರ್ಷ ತಾಲ್ಲೂಕು ಮಟ್ಟದಲ್ಲಿ ಸದಸ್ಯತ್ವ ನೋಂದಣಿಗೆ ₹ 1100 ಹಣ ಪಡೆದು ಕೇಂದ್ರ ಸಂಘಕ್ಕೆ ಪಾವತಿಸಲಾಗುತ್ತಿದೆ, ಸದಸ್ಯರ ಒಟ್ಟು ಹಣದಲ್ಲಿ ಮೂರನೆ ಒಂದು ಭಾಗ ತಾಲ್ಲೂಕು ಮಟ್ಟದಲ್ಲಿ ಸಮುದಾಯದ ವಿದ್ಯಾರ್ಥಿನಿಲಯ, ನಿವೇಶನ ಖರೀದಿ, ಶೈಕ್ಷಣಿಕ ಪ್ರೋತ್ಸಾಹಕ್ಕೆ ಹಣ ನೀಡಬೇಕು. ಇದು ಸಂಘದಲ್ಲಿರುವ ನಿಯಮ. ಆದರೂ ಇಡೀ ರಾಜ್ಯದಲ್ಲಿ ಗ್ರಾಮಾಂತರ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ’ ಎಂದು ದೂರಿದರು.

ADVERTISEMENT

‘ಸಂಘದ ಪದಾಧಿಕಾರಿಗಳಾಗಿ ಜಿಲ್ಲೆ ವ್ಯಾಪ್ತಿಯಲ್ಲಿ ಸಂಘದ ಸದಸ್ಯತ್ವದ ಗುರುತಿನ ಚೀಟಿ ವಿತರಣೆ ಮಾಡುವಾಗ ಸ್ಥಳೀಯ ಸಮಸ್ಯೆ ಅರಿತು ಅಭಿವೃದ್ಧಿ ಕೆಲಸಕ್ಕೆ ಒತ್ತು ನೀಡಲಾಗುತ್ತಿದೆ. ನಮಗೆ ಮಾತ್ರ ಗುರುತಿನ ಚೀಟಿ ವಿತರಣೆ ಮಾಡಿ ಎಂದರೆ ಯಾವ ನ್ಯಾಯ, ರಾಜ್ಯ ಸಂಘದ ಪದಾಧಿಕಾರಿಗಳು ತಾಲ್ಲೂಕು ಸಂಘಕ್ಕೆ ಬರುವವರೆಗೂ ಗುರುತಿನ ಚೀಟಿ ವಿತರಿಸುವುದಿಲ್ಲ’ ಎಂದು ಅವರು ಹೇಳಿದರು. ಸಂಘದ ಕಾರ್ಯದರ್ಶಿ ಶಿವರಾಮಯ್ಯ, ನಿರ್ದೇಶಕ ಶ್ರೀರಾಮಯ್ಯ ಉಪಸ್ಥಿತರಿದ್ದರು.

* *

ಒಕ್ಕಲಿಗರ ಸಂಘದಿಂದ ಮೈಸೂರು ಜಿಲ್ಲೆಗೆ ₹ 22 ಕೋಟಿ, ಮಂಡ್ಯ ಜಿಲ್ಲೆಗೆ ₹15 ಕೋಟಿ, ಕೋಲಾರ ಜಿಲ್ಲೆಗೆ ₹ 50 ಲಕ್ಷ, ಚಿಕ್ಕಬಳ್ಳಾಪುರ ಜಿಲ್ಲೆಗೆ ₹1 ಕೋಟಿ ನೀಡಲಾಗಿದೆ
ಬಿ. ಮುನೇಗೌಡ,
ಹಾಪ್‌ಕಾಮ್ಸ್ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.