ADVERTISEMENT

ಭೂ ಪರಿಹಾರ ಸಭೆ ಚರ್ಚೆ ಮತ್ತೆ ವಿಫಲ

ಪವರ್ ಗ್ರೀಡ್ ಕಾರ್ಪೋರೇಷನ್ ಇಂಡಿಯಾ ಕಂಪೆನಿ ಟವರ್ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 11:23 IST
Last Updated 12 ಡಿಸೆಂಬರ್ 2012, 11:23 IST

ದೊಡ್ಡಬಳ್ಳಾಪುರ: ಭೂ ಪರಿಹಾರಕ್ಕೆ ಆಗ್ರಹಿಸಿ ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ರೈತರ ನಡುವಿನ ಎರಡನೇ ಸಭೆ ವಿಫಲವಾಗಿದ್ದಾಗಿ ರೈತ ಮುಖಂಡರು ತಿಳಿಸಿದ್ದಾರೆ.

ಪವರ್ ಗ್ರೀಡ್ ಕಾರ್ಪೋರೇಷನ್ ಇಂಡಿಯಾ ವತಿಯಿಂದ ತಾಲ್ಲೂಕಿನ ಬಚ್ಚಹಳ್ಳಿ, ದೇವನಹಳ್ಳಿ, ಕೊರಟಗೆರೆ ಗ್ರಾಮಗಳಲ್ಲಿ ರೈತರ ಅನುಮತಿ ಇಲ್ಲದೆ ಹೊಲಗಳಲ್ಲಿ ಟವರ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ಇಲ್ಲಿನ ಬಳಕೆಯ ಭೂಮಿಗೆ ಸೂಕ್ತ ಪರಿಹಾರ ನೀಡದೆ ಇರುವ ಕುರಿತು ಚರ್ಚಿಸಲು ಈ ಸಭೆ ನಡೆಯಿತು. ಆದರೆ ಯಾವುದೇ ತೀರ್ಮಾನ ಹೊರಹೊಮ್ಮುವಲ್ಲಿ ಸಭೆ ಯಶಸ್ವಿಯಾಗಲಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡ ಡಾ.ಸಿ.ಎಸ್.ಶ್ರೀನಿವಾಸ್ ತಿಳಿಸಿದ್ದಾರೆ. 

`ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಜಿಲ್ಲಾಧಿಕಾರಿಗೆ ರೈತರ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟರು. ಬೆಂಗಳೂರು ದಕ್ಷಿಣ ಜಿಲ್ಲೆಯ ತಾಲ್ಲೂಕುಗಳಿಗೆ ಇದೇ ರೀತಿ ಭೂಮಿ ಬಳಸಿಕೊಳ್ಳುವಾಗ ಪರಿಹಾರ ನೀಡಲಾಗಿದೆ. ಆದರೆ ಈಗ ಗ್ರಾಮಾಂತರ ಜಿಲ್ಲೆಯ ರೈತರಿಗೆ ಪರಿಹಾರ ನೀಡಲು ಸಾಧ್ಯ ಇಲ್ಲ ಎನ್ನುವುದು ಅವೈಜ್ಞಾನಿಕ ನಿಯಮ. 2012ರ ಭೂ ಸ್ವಾಧೀನ ಕಾಯಿದೆಯಂತೆ ರೈತರ ಭೂಮಿಯನ್ನು ಯಾವುದೇ ಉದ್ದೇಶಕ್ಕೆ ಬಳಸಿಕೊಳ್ಳುವಾಗ ಸರ್ಕಾರ ಪರಿಹಾರ ನೀಡಲೇಬೇಕು. ಆದರೆ ಪವರ್ ಗ್ರೀಡ್ ಕಾರ್ಪೋರೇಷನ್ ಇಂಡಿಯಾ ಕಂಪೆನಿಯವರು ಒಂದು ಟವರ್ ಅಳವಡಿಸಲು ಕನಿಷ್ಠ 30 ರಿಂದ 40 ಅಡಿ ಸುತ್ತಳತೆಯಷ್ಟು ಭೂಮಿ ಬಳಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಬೃಹತ್ ವಿದ್ಯುತ್ ತಂತಿಗಳು ಹಾದು ಹೋಗುವ ಸ್ಥಳದಲ್ಲೂ ಸಣ್ಣ ಪುಟ್ಟ ಬೆಳೆಗಳನ್ನು ಹೊರತು ಮತ್ಯಾವುದೇ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲವಾಗಿದೆ. ಅಲ್ಲದೆ ಬೃಹತ್ ವಿದ್ಯುತ್ ತಂತಿಗಳು ಹಾದು ಹೋಗುವ ಭೂಮಿಗೆ ಬೆಲೆಯೇ ಇಲ್ಲದಾಗುತ್ತದೆ. ಈ ಹಿನ್ನೆಲೆಯಲ್ಲಿ ಪರಿಹಾರ ನೀಡದೆ ದೌರ್ಜನ್ಯ ನಡೆಸುವ ಮೂಲಕ ಕಂಪೆನಿಯು ಟವರ್‌ಗಳ ನಿರ್ಮಾಣಕ್ಕೆ ಮುಂದಾದರೆ ರೈತರು ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ' ಎಂದು ಎಚ್ಚರಿಸಿದರು.

`ನವೆಂಬರ್ ತಿಂಗಳಲ್ಲಿ ಸಭೆ ನಡೆದಾಗಲೂ ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ಈಗಲೂ ನೀಡುತ್ತಲೇ ಇದ್ದಾರೆ. ಇನ್ನೊಂದು ವಾರದ ಒಳಗೆ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸದಿದ್ದರೆ' ತೀವ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. 

`ಸಭೆಯ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಅಯ್ಯಪ್ಪ ಮಾತನಾಡಿ, `ಟವರ್‌ಗಳ ನಿರ್ಮಾಣಕ್ಕೆ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಪರಿಹಾರ ನೀಡುವ ಇಂಧನ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ವಾರದಲ್ಲಿ ಸಭೆ ನಡೆಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು' ಎಂದರು.

ಸಭೆಯಲ್ಲಿ ರಾಜ್ಯ ರೈತ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ವೆಂಕಟ ನಾರಾಯಣಪ್ಪ, ರಾಜ್ಯ ರೈತ ಸಂಘದ ಮುಖಂಡರಾದ ಕೆ.ಸುಲೋಚನಮ್ಮ, ವಸಂತ್‌ಕುಮಾರ್, ಸತೀಶ್, ಮುತ್ತೇಗೌಡ, ರಾಜ್ಯ ರೈತ ಶಕ್ತಿ ರಾಜ್ಯ ಘಟಕದ ಅಧ್ಯಕ್ಷ ಹೊನ್ನಾಘಟ್ಟ ಮಹೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.