ADVERTISEMENT

`ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಿ'

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 9:41 IST
Last Updated 4 ಸೆಪ್ಟೆಂಬರ್ 2013, 9:41 IST

ಚನ್ನಪಟ್ಟಣ: ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಿದರೆ ಅದು ಮಕ್ಕಳನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ ಎಂದು ಸಾಹಿತಿ ಕಂಪ್ಲಾಪುರ ಮೋಹನ್ ಅಭಿಪ್ರಾಯಪಟ್ಟರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕೂರಣಗೆರೆ ಕೃಷ್ಣಪ್ಪ ಅವರ ನಿವಾಸದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ `ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಹಾಗೂ ಕವಿಗೋಷ್ಠಿ ಕಾರ್ಯಕ್ರಮ'ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುವ ಗುಣ ಎಲ್ಲರಿಗೂ ತಂತಾನೆ ಬರಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, `ಪ್ರತಿ ತಿಂಗಳು ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಪರಂಪರೆ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಇದನ್ನು ಮುಂದುವರೆಸಿಕೊಂಡು ಹೋಗಬೇಕು. ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚೆಚ್ಚು ನಡೆಯಬೇಕು' ಎಂದು ಅವರು ತಿಳಿಸಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು ಮಾತನಾಡಿ, ಪ್ರತಿಯೊಬ್ಬರೂ ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡರೆ ಅದರಿಂದ ಬೌದ್ಧಿಕ ಸಂಪತ್ತು ವೃದ್ಧಿಯಾಗುತ್ತದೆ. ಮುಂದಿನ ದಿನಗಳಲ್ಲಿ ಮನೆಮನೆಗೂ ಸಾಹಿತ್ಯವನ್ನು ತಲುಪಿಸುವ ಗುರಿಯನ್ನು ತಾಲ್ಲೂಕು ಕಸಾಪ ಹೊಂದಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಸು.ತ.ರಾಮೇಗೌಡ ಮಾತನಾಡಿ, `ಸಾಹಿತ್ಯ ಮನಸ್ಸುಗಳನ್ನು ಬೆಸೆಯುವ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರೆದುಕೊಂಡು ಹೋದಾಗ ಗಟ್ಟಿ ಸಾಹಿತ್ಯ ನೆಲೆ ನಿಲ್ಲುತ್ತದೆ' ಎಂದರು.

ಕವಿಗೋಷ್ಠಿಯಲ್ಲಿ ಬೊಮ್ಮನಾಯಕನ ಹಳ್ಳಿ ಕೃಷ್ಣಪ್ಪ, ಡಾ.ಕೂಡ್ಲೂರು ವೆಂಕಟಪ್ಪ, ದೇ.ನಾರಾಯಣಸ್ವಾಮಿ, ಮತ್ತೀಕೆರೆ ಬಿ.ಚಲುವರಾಜು, ಶ್ರೀನಿವಾಸ್ ರಾಂಪುರ, ಯು.ಸಿ.ಪ್ರವೀಣ್, ಎಸ್.ರಾಮಲಿಂಗೇಶ್ವರ್, ಚಂದ್ರು, ಧರಣೇಶ್, ನಾರಾಯಣ ಸ್ವಾಮಿ, ಹೊಸದೊಡ್ಡಿ ರಮೇಶ್ ಮುಂತಾದವರು ಭಾಗವಹಿಸಿ ಕವನ ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಚನ್ನವೀರೇಗೌಡ, ಪ್ರಾಧ್ಯಾಪಕ ಡಾ.ಮಧುಸೂದನ ಜೋಷಿ, ಶಿಕ್ಷಕ ಸಿ.ಎಸ್.ವೆಂಕಟೇಗೌಡ, ಮಾಜಿ ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ಚಿಕ್ಕಪುಟ್ಟೇಗೌಡ, ಮಾಜಿ ತಾಲ್ಲೂಕು ಕಸಾಪ ಅಧ್ಯಕ್ಷ ಎಚ್.ಕೃಷ್ಣೇಗೌಡ, ಹಿರಿಯರಾದ ನಾಗಭೂಷಣ, ಚಿಕ್ಕನದೊಡ್ಡಿ ಕೆ.ಜಯರಾಂ ಮುಂತಾದವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಗಾಯಕ ಚೌ.ಪು.ಸ್ವಾಮಿ ಪ್ರಾರ್ಥಿಸಿದರು. ಶಿಕ್ಷಕ ಕೂರಣಗೆರೆ ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯದರ್ಶಿ ಬ್ರಹ್ಮಣೀಪುರ ರಾಮಕೃಷ್ಣಯ್ಯ ಸ್ವಾಗತಿಸಿದರು. ಮತ್ತೊಬ್ಬ ಕಾರ್ಯದರ್ಶಿ ವಿಜಯ್ ರಾಂಪುರ ನಿರೂಪಿಸಿದರು. ಗಾಯಕ ಬ್ಯಾಡರಹಳ್ಳಿ ಶಿವಕುಮಾರ್ ಹಾಗೂ ಭಾರತ್ ವಿಕಾಸ್ ಪರಿಷತ್ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಗೀತಗಾಯನ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.