ADVERTISEMENT

ಮಳೆಗೆ ಮನೆ ಕುಸಿತ ಮಗುವಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 5:12 IST
Last Updated 14 ಅಕ್ಟೋಬರ್ 2017, 5:12 IST

ದೇವನಹಳ್ಳಿ: ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಹೊಸಕುರುಬರ ಕುಂಟೆ ಗ್ರಾಮದಲ್ಲಿ ಮನೆ ಕುಸಿದಿದ್ದು ಮಗುವಿಗೆ ಗಾಯವಾಗಿದೆ. ವೆಂಕಟರಮಣಪ್ಪ ಅವರ ಮನೆ ಇದಾಗಿದೆ. ಮಣ್ಣಿನಿಂದ ನಿರ್ಮಿಸಿದ್ದ ಮನೆಯ ಗೋಡೆ ಮಳೆ ನೀರಿಗೆ ನೆನೆದು ಕುಸಿದಿದೆ. ಗೋಡೆ ಬೀಳುವುದನ್ನು ತಪ್ಪಿಸಿಕೊಳ್ಳಲು ಮುಂದಾಗಿದ್ದ ಮಗು ಮೌನಿಕಳ ಬಲಗಾಲಿಗೆ ಪೆಟ್ಟಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ವಸತಿ ಯೋಜನೆ ಭಾಗ್ಯವಿಲ್ಲ: ಆವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಗ್ರಾಮದಲ್ಲಿ ಜೆಡಿಎಸ್ ಪಕ್ಷ ಬೆಂಬಲಿತ ಸದಸ್ಯರು ಆಯ್ಕೆಗೊಂಡಿದ್ದಾರೆ. ಕುಸಿದ ಮನೆ ಮಾಲೀಕ ಕಾಂಗ್ರೆಸ್ ಪಕ್ಷದ ಬೆಂಬಲಿಗರು. ವಸತಿ ಯೋಜನೆಗಾಗಿ ಅರ್ಜಿ ಸಲ್ಲಿಸಿದರೂ ಅದೇ ಕಾರಣಕ್ಕೆ ಗ್ರಾಮಸಭೆ ಮತ್ತು ವಾರ್ಡ್ ಸಭೆಯಲ್ಲಿ ತಿರಸ್ಕೃತವಾಗುತ್ತಿದೆ. ತಾಲ್ಲೂಕು ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ದೂರು.

ಮನೆ ಮಾಲೀಕ ವೆಂಕಟರಮಣಪ್ಪ ಮಾತನಾಡಿ ‘ಮಕ್ಕಳು ಮತ್ತು ಮೊಮ್ಮಕ್ಕಳು ಸೇರಿ ಎಂಟು ಜನರಿದ್ದೇವೆ, ಮನೆ ಸಂಪೂರ್ಣ ಕುಸಿದಿದೆ. ನಾಲ್ಕು ಚೀಲ ರಾಗಿ, ಪಾತ್ರೆ ಪರಿಕರ ಕುಸಿದ ಗೋಡೆ ಅಡಿಯಲ್ಲಿ ಸಿಲುಕಿದೆ. ಕುಳಿತುಕೊಳ್ಳಲು ಜಾಗವಿಲ್ಲ’ ಎಂದರು.

ADVERTISEMENT

‘ಮನೆ ಕಟ್ಟಿಕೊಳ್ಳುವ ಆಸೆಯಿಂದ ಎಲ್ಲಾ ಕಡೆ ಅಲೆದಿದ್ದೇನೆ. ಪರಿಶಿಷ್ಟ ಜಾತಿಗೆ ಈಗ ವಸತಿ ಯೋಜನೆ ಇಲ್ಲ. ಸಾಮಾನ್ಯ ವರ್ಗಕ್ಕೆ ಮಾತ್ರ ಮನೆ, ಯೋಜನೆ ಬಂದಾಗ ಬಾ ಎಂದು ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ’ ಎಂದು ಅಳಲು ತೋಡಿಕೊಂಡರು.

ಜಿಲ್ಲಾ ಪಂಚಾಯಿತಿ ಸದಸ್ಯೆ ರಾಧಮ್ಮ ಮುನಿರಾಜು ಪ್ರತಿಕ್ರಿಯಿಸಿ, ‘ಮನೆ ಕುಸಿದಿರುವುದು ಗಮನಕ್ಕೆ ಬಂದಿದೆ. ವಸತಿಗಾಗಿ ಅಲೆದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಕ್ಷುಲ್ಲಕ ವಿಷಯಕ್ಕೆ ರಾಜಕೀಯ ತರಬಾರದು ವಸತಿ ಯೋಜನೆ ಅರ್ಹರ ಪಟ್ಟಿಯಲ್ಲಿ ತಕ್ಷಣ ಸೇರ್ಪಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.