ADVERTISEMENT

ಮಳೆ– ರೇಷ್ಮೆ ಗೂಡಿನ ಆವಕ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 5:05 IST
Last Updated 16 ಅಕ್ಟೋಬರ್ 2017, 5:05 IST
ವಿಜಯಪುರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೀಲರ್ ನಿಸಾರ್ ಅಹ್ಮದ್ ಅವರು ಗೂಡು ಖರೀದಿಸಲು ಪರೀಕ್ಷಿಸಿದರು
ವಿಜಯಪುರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೀಲರ್ ನಿಸಾರ್ ಅಹ್ಮದ್ ಅವರು ಗೂಡು ಖರೀದಿಸಲು ಪರೀಕ್ಷಿಸಿದರು   

ವಿಜಯಪುರ: ಮಳೆಯ ಅಭಾವದಿಂದ ಬಯಲು ಸೀಮೆಭಾಗದ ರೈತರು ನಂಬಿಕೊಂಡಿದ್ದ ರೇಷ್ಮೆ ಉದ್ಯಮದಿಂದ ವಿಮುಕ್ತರಾಗಿದ್ದರು. ಈಚೆಗೆ ಬೀಳುತ್ತಿರುವ ಉತ್ತಮ ಮಳೆಯಿಂದಾಗಿ ಪುನಃ ಉದ್ಯಮದ ಕಡೆಗೆ ಮರಳಿರುವುದರಿಂದ ಮಾರುಕಟ್ಟೆಗೆ ಬರುತ್ತಿರುವ ಗೂಡಿನ ಆವಕ ಪ್ರಮಾಣವು ಏರಿಕೆಯಾಗುತ್ತಿದೆ.

ಸತತವಾಗಿ ನಾಲ್ಕೈದು ವರ್ಷಗಳಿಂದ ತೀವ್ರ ಬರಗಾಲಕ್ಕೆ ಒಳಗಾಗಿ, ಅಂತರ್ಜಲ ಮಟ್ಟ ಕುಸಿದಿತ್ತು. ನೀರಿಗಾಗಿ ಕೊಳವೆಬಾವಿಗಳನ್ನೇ ಆಶ್ರಯಿಸಿದ್ದ ರೈತರು, ಹಿಪ್ಪುನೇರಳೆ ಕಿತ್ತುಹಾಕಿ, ಮಳೆಯಾಶ್ರಿತ ಬೆಳೆಗಳತ್ತ ಮುಖ ಮಾಡಿದ್ದರು.

ಬರದ ನಾಡಿಗೆ ಮಳೆಯ ಆಶ್ರಯ ಸಿಕ್ಕಿರುವ ಕಾರಣ ಬಹುತೇಕ ಕೆರೆಗಳಿಗೆ ನೀರು ಬಂದಿದೆ. ಕೆಲವು ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದಿದ್ದರೂ ಶೇ 75 ರಷ್ಟು ನೀರು ಬಂದಿದೆ. ಇದರಿಂದ ಅಂತರ್ಜಲದ ಮಟ್ಟ ಏರಿಕೆಯಾಗುವ ವಿಶ್ವಾಸ ಹೆಚ್ಚಾಗಿದೆ. ರೈತರು, ಹಿಪ್ಪುನೇರಳೆ ನಾಟಿ ಮಾಡಲು ಯತ್ನ ನಡೆಸುತ್ತಿದ್ದಾರೆ.

ADVERTISEMENT

ಕೊಳವೆಬಾವಿಗಳಲ್ಲಿ 1,500 ಅಡಿಗಳಿಗೂ ಹೆಚ್ಚು ಆಳಕ್ಕೆ ಕೊರೆಯಿಸಿದರೂ ನೀರು ಸಿಗುವುದು ಕನಸಿನ ಮಾತಾಗಿತ್ತು. ಒಂದು ತಿಂಗಳಿನಿಂದ ರೈತರ ಕೊಳವೆ
ಬಾವಿಗಳು ಚಾಲನೆಗೊಂಡಿಲ್ಲ. ಬೆಳೆಗಳಿಗೆ ಅಗತ್ಯವಾಗುವಷ್ಟು ಮಳೆ ಬಿದ್ದಿದೆ. ಇದರಿಂದ ಸಹಜವಾಗಿ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ನಾಲ್ಕು ತಿಂಗಳಿನಿಂದ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿದ್ದ ಗೂಡಿನ ಪ್ರಮಾಣದಲ್ಲಿ ತೀವ್ರಗತಿಯಲ್ಲಿ ಇಳಿಕೆಯಾಗಿತ್ತು ಎಂದು ಉಪನಿರ್ದೇಶಕ ಎಂ.ಎಸ್.ಬೈರಾರೆಡ್ಡಿ ತಿಳಿಸಿದ್ದಾರೆ. ನೂರರ ಆಸುಪಾಸಿನಷ್ಟು ಲಾಟುಗಳಷ್ಟು ಗೂಡು ಮಾತ್ರವೇ ಬರುತ್ತಿತ್ತು.

ಒಣಗಿ ಹೋಗಿ ಹಿಪ್ಪುನೇರಳೆ ಎಲೆಗಳಲ್ಲಿ ನೀರಿನ ಅಂಶದ ಕೊರತೆಯಿಂದ ಸೊರಗಿ ಹೋಗಿದ್ದ ತೋಟಗಳು, ಉತ್ತಮ ತೇವಾಂಶದಿಂದ ನಳನಳಿಸುತ್ತಿವೆ. ಗುಣಿ ಪದ್ಧತಿಯಲ್ಲಿ ಹಿಪ್ಪುನೇರಳೆ ಮಾಡಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದ್ದೆವು. ದ್ವಿತಳಿ ಗೂಡು ಉತ್ಪಾದಿಸುವ ಕಡೆಗೆ ಒಲವು ತೋರುವಂತೆ ರೈತರನ್ನು ಮನವೊಲಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ನಾಲ್ಕೈದು ದಿನಗಳಿಂದ ಮಾರುಕಟ್ಟೆಗೆ ಬರುವ ಗೂಡಿನ ಪ್ರಮಾಣ 200 ದಾಟಿದೆ ಎಂದಿದ್ದಾರೆ.

ಊಜಿ ಸಮಸ್ಯೆ: ಈಚೆಗೆ ಉತ್ತಮವಾಗಿ ಮಳೆಯಾಗುತ್ತಿದೆ. ಇದರಿಂದ ವಾತಾವರಣ ಚೆನ್ನಾಗಿದೆ. ರೇಷ್ಮೆ ಬೆಳೆ ಚೆನ್ನಾಗಿ ಆಗುತ್ತಿದೆ. ಆದರೆ ಊಜಿಗಳ ಸಮಸ್ಯೆ ರೈತರನ್ನು ಕಾಡತೊಡಗಿದೆ ಎಂದು ರೈತ ಮುನಿಕೃಷ್ಣಪ್ಪ ಹೇಳಿದ್ದಾರೆ. ಹುಳು ಸಾಕಾಣಿಕೆ ಮನೆಗಳ ಬಳಿಯಲ್ಲಿ ಎಷ್ಟೇ ಭದ್ರವಾಗಿ ನೋಡಿಕೊಂಡರೂ ಊಜಿ ಬೀಳುತ್ತಿವೆ. ಮಳೆಯಿಲ್ಲದೆ ಹೋದರೆ ಉಷ್ಣಾಂಶ ಹೆಚ್ಚಾಗಿ ಬೆಳೆಗಳು ಆಗಲ್ಲ ಎನ್ನುತ್ತಾರೆ.

ನೂಲು ಬಿಚ್ಚಾಣಿಕೆ ಆಗುತ್ತಿಲ್ಲ: ಒಂದು ತಿಂಗಳಿನಿಂದ ಮೋಡದ ವಾತಾವಾರಣವಿರುವುದರಿಂದ ಮಾರುಕಟ್ಟೆಯಲ್ಲಿ ಗೂಡು ತೆಗೆದುಕೊಂಡು ಹೋದರೂ, ನೂಲು ಬಿಚ್ಚಾಣಿಕೆ ಸರಿಯಾಗಿ ಆಗುತ್ತಿಲ್ಲ, ಗೂಡಿನಲ್ಲಿ ತೇವಾಂಶವಿರುವುದರಿಂದ ಗಂಟು ಕಟ್ಟಿಕೊಂಡು ಹಾಗೇ ಇರುತ್ತದೆ. ಇದರಿಂದ ರೀಲರುಗಳು ಸಮಸ್ಯೆಯಾಗುತ್ತಿದೆ. ಉತ್ತಮ ಗೂಡಿಗೆ ಒಳ್ಳೆಯ ಬೆಲೆ ಇದೆ ಎಂದು ರೀಲರ್ ನಿಸಾರ್ ಅಹ್ಮದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.