ADVERTISEMENT

ಮುತ್ಯಾಲಮ್ಮ ಜಾತ್ರೆಯಲ್ಲಿ ಭಾಗವಹಿಸದಿರಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 4:52 IST
Last Updated 27 ಮಾರ್ಚ್ 2018, 4:52 IST
ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಮುತ್ಯಾಲಮ್ಮ ಜಾತ್ರೆಯ ಕುರಿತು ಸಭೆ ಸೇರಿದ್ದ ಏಳೂರು ಗ್ರಾಮದ ಮುಖಂಡರು
ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಮುತ್ಯಾಲಮ್ಮ ಜಾತ್ರೆಯ ಕುರಿತು ಸಭೆ ಸೇರಿದ್ದ ಏಳೂರು ಗ್ರಾಮದ ಮುಖಂಡರು   

ದೊಡ್ಡಬಳ್ಳಾಪುರ: ಪ್ರತಿವರ್ಷ ಸಾಂಪ್ರದಾಯಿಕವಾಗಿ ಎಲ್ಲ ಗ್ರಾಮಸ್ಥರನ್ನು ಕರೆದು ಮಾಡುತ್ತಿದ್ದ ಶ್ರೀ ಮುತ್ಯಾಲಮ್ಮ ಜಾತ್ರೆಗೆ ಈ ಬಾರಿ ಗ್ರಾಮಸ್ಥರನ್ನು ಕರೆಯದೇ ನಿರ್ಲಕ್ಷಿಸಿ, ದಿನಾಂಕ ನಿಗದಿ ಮಾಡಿರುವ ಕ್ರಮವನ್ನು ಸ್ಥಳೀಯರು ಖಂಡಿಸಿದರು. ಏಪ್ರಿಲ್ 10 ಮತ್ತು 11ರಂದು ನಡೆಯಲಿರುವ ಮುತ್ಯಾಲಮ್ಮ ಜಾತ್ರೆಗೆ 7 ಗ್ರಾಮಗಳಿಂದ ನಡೆಯುತ್ತಿದ್ದ ಯಾವುದೇ ಆಚರಣೆಗಳನ್ನು ಕೈಗೊಳ್ಳದೇ ಮುತ್ಯಾಲಮ್ಮ ಜಾತ್ರೆಯಲ್ಲಿ ಭಾಗವಹಿಸದಿರಲು ನಿರ್ಧರಿಸಲಾಗಿದೆ ಎಂದು ಗ್ರಾಮಗಳ ಮುಖಂಡರು ತಿಳಿಸಿದ್ದಾರೆ.

ಜಾತ್ರೆ ಕುರಿತು ನಗರದ ಮಾಂಗಲ್ಯ ಸಮುದಾಯ ಭವನದಲ್ಲಿ ಸಭೆ ಸೇರಿದ್ದ ನಾಗಸಂದ್ರ, ದರ್ಗಾಜೋಗಿಹಳ್ಳಿ, ಶಾಂತಿನಗರ, ರೋಜಿಪುರ, ಕುರುಬರಹಳ್ಳಿ, ಹೊಸಳ್ಳಿ ಹಾಗೂ ಕೊಡಿಗೆಹಳ್ಳಿ ಗ್ರಾಮಗಳ ಗ್ರಾಮಸ್ಥರು ಪತ್ರಿಕಾ ಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಪ್ರತಿ ವರ್ಷ ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುವ ಮುತ್ಯಾಲಮ್ಮ ಜಾತ್ರೆಗೆ ಮಾರ್ಚ್ ತಿಂಗಳಲ್ಲಿ ಏಳೂರು ಮುಖಂಡರ ಹಾಗೂ ದೇವಾಲಯದ ಧರ್ಮದರ್ಶಿಗಳ, ಹಿರಿಯರ ಸಭೆ ನಡೆಯುತ್ತದೆ. ಸಭೆಯಲ್ಲಿ ಜಾತ್ರೆಯ ರೂಪುರೇಷೆಗಳ ಕುರಿತ ಚರ್ಚೆ ನಡೆಯುತ್ತದೆ. ದಿನಾಂಕ ಗೊತ್ತು ಪಡಿಸಿ ಮಂಗಳವಾರ ಆರತಿಗಳು, ಬುಧವಾರ ಹಗಲು ಜಾತ್ರೆ ಎಂದು ಪ್ರಚಾರ ಕೈಗೊಳ್ಳಲಾಗುತ್ತದೆ. ಮಂಗಳವಾರ ಪ್ರಾತಃಕಾಲಕ್ಕೆ ಮುತ್ತಿನ ಅಲಂಕಾರದ ರಥ ಸಿದ್ದಗೊಳ್ಳುತ್ತದೆ ಎಂದರು.

ADVERTISEMENT

ಉತ್ಸವಮೂರ್ತಿಯ ಭವ್ಯ ಮೆರವಣಿಗೆ ನಡೆಯುತ್ತದೆ. ಆಗಿನಿಂದಲೂ ರೋಜಿಪುರ ಮುತ್ಯಾಲಮ್ಮದೇವಿಯ ತವರು ಮನೆಯೆಂದು ಬಿಂಬಿತವಾಗಿದೆ. ಇಂದಿಗೂ ಜಾತ್ರೆಯ ದಿನದಂದು ಹೆಣ್ಣು ಮಗಳು ತವರಿಗೆ ಹೋಗಿ ಬಂದಂತೆ ಸಂಭ್ರಮಿಸುವ ಆಚರಣೆ ನಡೆಯುತ್ತಿದೆ. ಆದರೆ ಮುತ್ಯಾಲಮ್ಮ ದೇವಾಲಯದ ಆಡಳಿತ ಮಂಡಳಿ ಸೇವಾ ಟ್ರಸ್ಟ್ ಹೆಸರಿನಲ್ಲಿ ಏಪ್ರಿಲ್ 10 ಮತ್ತು 11ರಂದು ಮುತ್ಯಾಲಮ್ಮ ಜಾತ್ರೆ ನಡೆಯುವ ಕುರಿತು ಏಕಾಏಕಿ ಕರಪತ್ರಗಳನ್ನು ಮುದ್ರಿಸಲಾಗಿದೆ ಎಂದು ಟೀಕಿಸಿದರು.

ದೇವಾಲಯದ ಆಡಳಿತದ ವಿಚಾರದ ವಿವಾದಗಳು ಏನೇ ಇದ್ದರೂ ಕನಿಷ್ಠ ಗ್ರಾಮಸ್ಥರನ್ನು ಕರೆದು ಜಾತ್ರೆಯ ದಿನಾಂಕವನ್ನು ನಿರ್ಧರಿಸಬೇಕಾಗಿತ್ತು. ಆದರೆ ಟ್ರಸ್ಟ್‌ನವರು ಹಾಗೇ ಮಾಡದೇ ಸರ್ವಾಧಿಕಾರಿ ಧೋರಣೆ ತಳೆದಿದ್ದಾರೆ. ಆದ್ದರಿಂದ ಆರತಿಗಳು, ರಥ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡದೇ ಜಾತ್ರೆಯನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದರು.

ಮತ್ತೊಂದು ದಿನ ನಿಗದಿ

ಏಳೂರಿನ ಗ್ರಾಮಸ್ಥರು ಮತ್ತೊಂದು ಸಭೆ ಸೇರಿ ದಿನಾಂಕ ನಿಗದಿ ಪಡಿಸಿ ಎಂದಿನಂತೆ ನಡೆಯುವ ಜಾತ್ರೆಯ ಆಚರಣೆಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ವಿಚಾರವನ್ನು ತಹಸೀಲ್ದಾರ್ ಹಾಗೂ ಪೊಲೀಸರ ಗಮನಕ್ಕೆ ತಂದು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.