ADVERTISEMENT

ಯುವ ಕಾಂಗ್ರೆಸ್‌ ಸಮಿತಿಗೆ ಚುನಾವಣೆ ಬೀದಿ ಕಾಳಗ: ಮತದಾನ ರದ್ದು

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 9:06 IST
Last Updated 7 ಜನವರಿ 2014, 9:06 IST

ದೊಡ್ಡಬಳ್ಳಾಪುರ: ನೆಲಮಂಗಲ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಗಳ  ಯುವ ಕಾಂಗ್ರೆಸ್‌ ಸಮಿತಿಗೆ ಸೋಮವಾರ ನಗರದ ಕನ್ನಡ ಜಾಗೃತ ಪರಿಷತ್‌ನಲ್ಲಿ ನಡೆದ ಮತದಾನದ ವೇಳೆ ನೆಲಮಂಗಲ ವಿಧಾನ ಸಭಾ ಕ್ಷೇತ್ರದ ಎರಡು ಗುಂಪುಗಳ ನಡುವೆ ಬೀದಿಕಾಳಗ ನಡೆದ ಪರಿಣಾಮ ಮತದಾತನವನ್ನೇ ರದ್ದುಪಡಿಸಲಾಯಿತು.

ಕಾಂಗ್ರೆಸ್‌ ಯುವ ಸಮಿತಿಯ ರಾಜ್ಯ ಸಮಿತಿ, ವಿಧಾನ ಸಭಾ ಕ್ಷೇತ್ರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ತಲಾ ಹತ್ತು ಸ್ಥಾನಗಳಿಗೆ ಸೋಮವಾರ ಮತದಾನ ನಡೆಯುತ್ತಿತ್ತು. ರಾಜ್ಯ ಸಮಿತಿಯ ಮತ ಪತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯವಾಪಿ ಮತದಾನವನ್ನು ರದ್ದು ಪಡಿಸಲಾಯಿತು.

ಉಳಿದಂತೆ ವಿಧಾನ ಸಭಾ ಹಾಗೂ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯುತ್ತಿತ್ತು. ಈ ವೇಳೆ ನೆಲಮಂಗಲ ತಾಲ್ಲೂಕಿನ ವಾಸುಕುಂಟೆ ಗ್ರಾಮದ ಚೇತನ್‌ ಏಕಾಏಕಿ ಮತಗಟ್ಟೆಗೆ ನುಗ್ಗಿ ಮತದಾನ ನಿಲ್ಲಿಸುವಂತೆ ಆಗ್ರಹಿ ಸಿದರು. ಮತದಾನ ನಿಲ್ಲಿಸಬಾರದು ಎಂದು ಮತಗಟ್ಟೆಗೆ ನುಗ್ಗಿದ ಉಮೇಶ್‌, ಮೋಹನ್‌, ಚೇತನ್‌ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟ ಆರಂ ಭವಾಯಿತು.

ಇದೇ ಸಂದರ್ಭಕ್ಕೆ ಜಾಗೃತಿ ಪರಿಷತ್‌ ಸಮೀಪದಲ್ಲೇ ನಗರಸಭೆಗೆ ಸೇರಿದ ಟ್ರ್ಯಾಕ್ಟರ್‌ಗೆ ಕಸ ತುಂಬುತ್ತಿದ್ದ ಪೌರ ಕಾರ್ಮಿಕರ ಬಳಿ ಇದ್ದ ಹರಿತವಾದ ಆಯುಧಗಳನ್ನು ಕೈಗೆ ತೆಗೆದುಕೊಂಡ ಚೇತನ್‌, ಉಮೇಶ್‌ ಮತ್ತಿತರರು  ನಡು ರಸ್ತೆಯಲ್ಲೇ ಹೊಡೆದಾಟಕ್ಕೆ ಇಳಿದರು.

ತಕ್ಷಣ ಮಧ್ಯ ಪ್ರವೇಶ ಮಾಡಿದ ದೊಡ್ಡಬಳ್ಳಾಪುರ ಯುವ ಕಾಂಗ್ರೆಸ್‌ ಸಮಿತಿ ಕಾರ್ಯಕರ್ತರು ಪೊಲೀಸರ ಸಹಾಯದಿಂದ ಸಂಘರ್ಷ ತಪ್ಪಿಸಿದರು. ಇದರಿಂದಾಗಿ ಜಾಗೃತ ಪರಿಷತ್‌ ಸಮೀಪ ಕೆಲ ಸಮಯ ಬಿಗುವಿನ ವಾತಾ ವರಣ ನಿರ್ಮಾಣವಾಗಿತ್ತು. ಹೆಚ್ಚುವರಿ ಪೊಲೀಸರು ಆಗಮಿಸಿದ ನಂತರ ಮತಗ ಟ್ಟೆಯಿಂದ ಎಲ್ಲರನ್ನೂ ಹೊರ ಕಳುಹಿಸಿ, ಮತದಾನವನ್ನು ಮುಂದೂಡಿರುವು ದಾಗಿ ಘೋಷಿಸ ಲಾಯಿತು.

ಖಂಡನೀಯ: ಯುವ ಕಾಂಗ್ರೆಸ್‌ ಸಮಿತಿ ಚುನಾವಣೆ ಸಮಯದಲ್ಲಿ ನೆಲಮಂಗಲ ತಾಲ್ಲೂಕಿನ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟ  ಖಂಡನೀಯ. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಸಮಿತಿಗೂ ಸೋಮವಾರ ಮಗಟ್ಟೆಯಲ್ಲಿ ನಡೆದ ಹೊಡೆದಾಟಕ್ಕೂ ಯಾವುದೇ ಸಂಬಂಧ ಇಲ್ಲ. ಇನ್ನು ಮುಂದೆ ನಡೆಯುವ ಯಾವುದೇ ಚುನಾವಣೆಯಲ್ಲೂ ನೆಲಮಂಗಲ ಕ್ಷೇತ್ರದ ಮತದಾರರನ್ನು ತಾಲ್ಲೂಕಿಗೆ ಸೇರಿಸಬಾರದು ಎಂದು ದೊಡ್ಡಬಳ್ಳಾಪುರ ಯುವ ಸಮಿತಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ನಗರಕ್ಕೆ ಕಾಲಿಟ್ಟ ನೆಲಮಂಗಲದ ಬೀದಿಕಾಳಗ: ನೆಲಮಂಗಲ ಅಂದರೆನೇ ಸಣ್ಣ ಪುಟ್ಟದಕ್ಕೂ ಬೀದಿ ಕಾಳಗ, ಎರಡು ಗುಂಪುಗಳ ನಡುವೆ ಹೊಡೆದಾಟ, ಕೊಲೆಗಳು ಸಾಮಾನ್ಯ ಎನ್ನುವಂತಾಗಿದೆ. ಇಂತಹ ಹೊಡೆದಾಟ, ಬೀದಿ ಕಾಳಗದ ಸಂಸ್ಕೃತಿ ಯುವ ಕಾಂಗ್ರೆಸ್‌ ಸಮಿತಿ ಚುನಾವಣೆ ಮೂಲಕ ನಗರಕ್ಕೂ ಕಾಲಿಟ್ಟಿದೆ. ಈ ಬೀದಿ ಕಾಳಗವನ್ನು ಮೊಳಕೆಯಲ್ಲೇ ಚುವುಟಿಹಾಕುವ ಮೂಲಕ ನೆಲಮಂಗಲದ ಬೀದಿ ಕಾಳಗ ಇಲ್ಲಿಗೆ ಹಬ್ಬದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸೋಮವಾರ ಮತಗಟ್ಟೆ ಸಮೀಪ ಗಲಾಟೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೀದಿ ಕಾಳಗವನ್ನು ಪ್ರತ್ಯಕ್ಷ ಕಂಡ ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.