ವಿಜಯಪುರ: ಸಮೀಪದ ಪಿ.ರಂಗನಾಥಪುರದ ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆಯಾದ ಕೆಎಸ್‌ಆರ್‌ಟಿಸಿ ನೂತನ ಬಸ್ ಸಂಚಾರಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಚಿಕ್ಕಬಳಾಪುರದಿಂದ ಪಿ.ರಂಗನಾಥಪುರ ಮಾರ್ಗವಾಗಿ ವಿಜಯಪುರ ತಲುಪುವ ಕೆಎಸ್‌ಆರ್‌ಟಿಸಿ ಬಸ್‌ಗೆ ಹಸಿರು ನಿಶಾನೆ ತೊರಿ ಮಾತನಾಡಿದ ಗೊಡ್ಲು ಮುದ್ದೇನಹಳ್ಳಿ ಪಂಚಾಯ್ತಿ ಸದಸ್ಯ ಚಲುಪನ ನಟರಾಜ್, ಶಾಲಾ ಕಾಲೇಜುಗಳಿಗೆ ವಿಜಯಪುರಕ್ಕೆ ಬಂದು ಹೋಗುವ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಇದರಿಂದ ಸಂತಸವಾಗಿದೆ ಎಂದರು.
ಸಮೀಪದ ಕಂತಳ್ಳಿ, ಸಿ.ಎನ್. ಹೊಸೂರು, ಎ.ರಂಗನಾಥಪುರ, ಪಿ.ರಂಗನಾಥಪುರ, ಕೊಮ್ಮಸಂದ್ರ, ಚಂದೇನಹಳ್ಳಿ ಕಡೆಯಿಂದ 150 ಕ್ಕೂ ಹೆಚ್ಚು ಮಕ್ಕಳು ವಿಜಯಪುರದ ಶಾಲಾ ಕಾಲೇಜುಗಳಿಗೆ ನಿತ್ಯವೂ ಬರುತ್ತಾರೆ. ಇವರಿಗೆ ಬಸ್ ವ್ಯವಸ್ಥೆ ಇಲ್ಲದೆ ಅನಾನುಕೂಲವಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಬಹಳ ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದರು. ಈಗ ಈ ಸೌಲಭ್ಯ ದೊರೆತಿದೆ ಎಂದರು.
ಚಿಕ್ಕಬಳ್ಳಾಪುರದಿಂದ ಬೆಳಗ್ಗೆ 9 ಗಂಟೆಗೆ ಪಿ.ರಂಗನಾಥಪುರ ಮಾರ್ಗವಾಗಿ ವಿಜಯಪುರಕ್ಕೆ ಬರುವ ಬಸ್ ಅನ್ನು ಸಂಜೆ ವಿಜಯಪುರದಿಂದ 5 ಗಂಟೆಗೆ ಪಿ. ರಂಗನಾಥಪುರ ಮಾರ್ಗವಾಗಿ ಚಿಕ್ಕಬಳ್ಳಾಪುರಕ್ಕೆ ಹೋಗುವ ವ್ಯವಸ್ಥೆ ಮಾಡಿದರೆ ಗ್ರಾಮಸ್ಥರಿಗೆ ಹಾಗೂ ಶಾಲಾ-ಕಾಲೇಜು ಮಕ್ಕಳಿಗೆ ಓಡಾಡಲು ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಬಗ್ಗೆ ಶಾಸಕರಲ್ಲಿ ತಾವು ಮನವಿ ಮಾಡುವುದಾಗಿಯೂ ಅವರು ತಿಳಿಸಿದರು.
ಗೊಡ್ಲು ಮುದ್ದೇನಹಳ್ಳಿ ಪಂಚಾಯ್ತಿ ಸದಸ್ಯ ಮುನಿರಾಜು, ಪಿ.ರಂಗನಾಥಪುರ ಕಾಂಗ್ರೆಸ್ ಬೂತ್ ಅಧ್ಯಕ್ಷ ನಾರಾಯಣ ಸ್ವಾಮಿ, ಉಪಾಧ್ಯಕ್ಷ ಶಿವರಾಜ್ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.