ADVERTISEMENT

ರಕ್ತದಾನಕ್ಕೆ ಹಿಂಜರಿಕೆ ಬೇಡ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ದೊಡ್ಡಬಳ್ಳಾಪುರ: ವೈಜ್ಞಾನಿಕವಾಗಿ ಎಷ್ಟೆ ಆವಿಷ್ಕಾರ ನಡೆದರೂ ಕೃತಕ ರಕ್ತ ಸೃಷ್ಟಿಸಲು ಸಾಧ್ಯವಾಗಿಲ್ಲ. ರಕ್ತವನ್ನು ರಕ್ತದಾನದಿಂದ ಮಾತ್ರ ಪಡೆಯಬಹುದಾಗಿದ್ದು,ಆರೋಗ್ಯವಂತರಾದ ಯಾರೇ ಆದರೂ ರಕ್ತದಾನ ಮಾಡಲು ಹಿಂಜರಿಯುವ ಅಗತ್ಯ ಇಲ್ಲ ಎಂದು ಕೆ.ಸಿ.ಜನರಲ್ ಆಸ್ಪತ್ರೆ ವೈದ್ಯಾಧಿಕಾರಿ ಎಸ್.ಪಿ.ರಾಜಣ್ಣ ತಿಳಿಸಿದರು.

ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಕರ್ನಾಟಕ ರಾಜ್ಯ ರಕ್ತಚಾಲನಾ ಪರಿಷತ್ತಿನ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರ ಹಾಗೂ ಸರಣಿ ಕಾರ್ಯಕ್ರಮಗಳ ಸಮಾರೋಪದಲ್ಲಿ ಮಾತನಾಡಿದರು. ಆರೋಗ್ಯವಂತರಾದ 18 ರಿಂದ 60 ವರ್ಷದೊಳಗಿನವರು ರಕ್ತದಾನ ಮಾಡಲು ಹಿಂಜರಿಯುವ ಅಗತ್ಯ ಇಲ್ಲ. ರಕ್ತದಾನ ನೀಡಿದ 24 ಗಂಟೆಯಲ್ಲಿ ಅಷ್ಟೇ ಪ್ರಮಾಣದ ರಕ್ತ ದೇಹದಲ್ಲಿ ಸೃಷ್ಟಿಯಾಗುತ್ತದೆ. ಈ ದಿಸೆಯಲ್ಲಿ ಯುವಕರು ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ಕಾರ್ಯಪ್ರವೃತ್ರರಾಗಬೇಕು. ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಪ್ರಾಚಾರ್ಯ ಪ್ರೊ.ಎಸ್.ಪಿ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಡಿ.ಶ್ರೀಕಾಂತ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಹನುಮಂತರಾಯ, ಎನ್‌ಎಸ್‌ಎಸ್ ಅಧಿಕಾರಿ ಎನ್.ಶ್ರೀನಿವಾಸಯ್ಯ, ಪ್ರಾಧ್ಯಾಪಕರಾದ ಸಿ.ರಾಮಚಂದ್ರ, ಪ್ರವೀಣ್ ಮತ್ತಿತರರು  ಭಾಗವಹಿಸಿದ್ದರು.

ಕೆ.ಎಸ್.ನಾಗಭೂಷಣ್ ಮತ್ತು ಸಂಗಡಿಗರಿಂದ ಏಡ್ಸ್ ಕುರಿತ ಜನ ಜಾಗೃತಿ ಚಾದು ಪ್ರದರ್ಶನ ನಡೆಯಿತು. ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಸಹಯೋಗದೊಂದಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.