ADVERTISEMENT

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ: ವಿರೋಧ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ಆನೇಕಲ್ : ಇಲ್ಲಿನ ರಾಷ್ಟ್ರೀಯ ಹೆದ್ದಾರಿ 7ರ ವಿಸ್ತರಣೆಗಾಗಿ ಗುರುವಾರ ಬೆಳಿಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚಂದಾಪುರದಲ್ಲಿ ಕಟ್ಟಡಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ಆರಂಭಿಸಿದ್ದು, ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು 8 ವರ್ಷಗಳ ಹಿಂದೆ ಭೂಮಿ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಚದುರ ಅಡಿಗೆ ನೂರು ರೂಪಾಯಿಗಳನ್ನು ಮಾತ್ರ ನೀಡಿದ್ದರು. 

ಆದರೆ ಪ್ರಸ್ತುತ ಚಂದಾಪುರದಲ್ಲಿ ಮಾರುಕಟ್ಟೆ ಬೆಲೆ ಚದುರ ಅಡಿಗೆ 3000 ರೂಪಾಯಿಗಿಂತ ಹೆಚ್ಚಿದ್ದು ಅತ್ಯಂತ ಕಡಿಮೆ ಬೆಲೆ ನೀಡಲಾಗಿದೆ. ಈಗ ಹೆಚ್ಚಿನ ಬೆಲೆ ನೀಡಬೇಕು. ಕನಿಷ್ಠ 350ರೂ.ಗಳಾದರೂ ನೀಡಬೇಕು ಎಂದು ರೈತರ ಒತ್ತಾಯಿಸಿ ಕಟ್ಟಡಗಳನ್ನು ತೆರವುಗೊಳಿಸಲು ಬಂದ ಅಧಿಕಾರಿಗಳಿಗೆ ತಡೆಯೊಡ್ಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಟಿ.ದಯಾನಂದರೆಡ್ಡಿ ಮತ್ತಿತರ ಮುಖಂಡರು ಸ್ಥಳಕ್ಕೆ ಆಗಮಿಸಿ ತಹಶೀಲ್ದಾರ್ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.ಒಂದು ವಾರ ಗಡುವು ಪಡೆದು ಈ ಅವಧಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.