ADVERTISEMENT

ವಿಜಯಪುರ: ಜಲಲ ಜಲ ಜಲಬಾಧೆ...

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST
ವಿಜಯಪುರ: ಜಲಲ ಜಲ ಜಲಬಾಧೆ...
ವಿಜಯಪುರ: ಜಲಲ ಜಲ ಜಲಬಾಧೆ...   

ವಿಜಯಪುರ: ವೇಗವಾಗಿ ಬೆಳೆಯುತ್ತಿರುವ ವಿಜಯಪುರ ಪಟ್ಟಣದಲ್ಲಿ ವೃದ್ಧಿಸುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ  ಮೂತ್ರಾಲಯಗಳ ನಿರ್ಮಾಣದ ಅವಶ್ಯಕತೆ ತುರ್ತಾಗಿದ್ದು ಈ ಬಗ್ಗೆ ಪುರಸಭೆ ತಕ್ಷಣವೇ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಹಿಂದೆ ಇಲ್ಲಿನ ಗಾಂಧಿ ಚೌಕದ ರುದ್ರದೇವರ ದೇವಾಲಯದ ಬಳಿ ಇದ್ದ ಮೂತ್ರಾಲಯ, ಅರಳೇಪೇಟೆ ರಸ್ತೆಯಲ್ಲಿ,  ಗಂಗಾತಾಯಿ ದೇವಾಲಯದ ಹಿಂಭಾಗ, ಮಾಯಾ ಆಂಗ್ಲಶಾಲೆಯ ಬಳಿ, ಹಾಗೂ ಪುರಸಭೆ ಬಳಿ ಇದ್ದ ಮೂತ್ರಾಲಯಗಳು ಒಂದೊಂದಾಗಿ ನಾಶವಾಗಿದ್ದು ಇದರಿಂದ ವಿಪರೀತ ತೊಂದರೆಯುಂಟಾಗಿದೆ.

ಸಾರ್ವಜನಿಕರು ತಮ್ಮ ನೈಸರ್ಗಿಕ ಬಾಧೆ ತೀರಿಸಿಕೊಳ್ಳುವುದಕ್ಕೆ ಇನ್ನಿಲ್ಲದಂತೆ ಪರದಾಡಬೇಕಾದ ಸ್ಥಿತಿ ಇದೆ. ಸೂಕ್ತ ಮೂತ್ರಾಲಯಗಳು ಇಲ್ಲದೇ ಇರುವುದರಿಂದ ಜನರು ಮೂತ್ರ ವಿಸರ್ಜನೆಗೆ ಪರದಾಡುತ್ತಾ ರಸ್ತೆ ಬದಿಯನ್ನೇ ಆಶ್ರಯಿಸುತ್ತಿದ್ದಾರೆ. ಇದರಿಂದ ಪರಿಸರದ ಮೇಲೂ ಸಾಕಷ್ಟು ಪರಿಣಾಮ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಅಲವತ್ತುಕೊಂಡಿದ್ದಾರೆ.

ದೇವನಹಳ್ಳಿ ರಸ್ತೆಯ ಪುರಸಭಾ ಕಚೇರಿ ಹಿಂಭಾಗದಲ್ಲಿ, ಈ ಹಿಂದೆ ಅದರ ಬಳಿಯಲ್ಲಿಯೇ ಸಾರ್ವಜನಿಕ ಮೂತ್ರಾಲಯಗಳ್ದ್ದಿದವು. ಆದರೆ ಇವುಗಳನ್ನು ಹೊಡೆದು ಹಾಕಲಾಗಿದ್ದು ಈ ಭಾಗದಲ್ಲಿ ಕೂಡಲೇ ಮೊದಲಿನಂತೆ ಮೂತ್ರಾಲಯ ನಿರ್ಮಿಸಬೇಕೆಂಬುದು ಸಾರ್ವಜನಿಕರು ಪತ್ರಿಕೆಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಪುರಸಭೆಯ ಹಿಂಭಾಗದ ಸರಕಾರಿ ಮಾದರಿ ಪಾಠಶಾಲೆಯ ಎದುರು ಕೂಡಾ ಈ ಹಿಂದೆ ಇದ್ದಂತೆಯೇ ಮೂತ್ರಾಲಯಗಳನ್ನು ನಿರ್ಮಿಸುವುದು ಅನುಕೂಲಕರ. ಇದರಿಂದ ಹೊರ ಊರುಗಳಿಂದ ಗಂಟೆ-ಗಟ್ಟಲೇ ಪ್ರಯಾಣಿಸಿ ಬರುವವರಿಗೆ ಮತ್ತು ಟೌನ್ ಹಾಲ್ ಬಳಿ ಇಳಿದ ಪ್ರಯಾಣಿಕರಿಗೆ  ಅನುಕೂಲವಾಗುತ್ತದೆ. ಆದ್ದರಿಂದ ಸಂಬಂಧಿಸಿದವರು ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಂದು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.