ADVERTISEMENT

ವಿಜಯಪುರ: ರೇಷ್ಮೆ ಆಮದು ಸುಂಕ ಏರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ವಿಜಯಪುರ: ರೇಷ್ಮೆ ಆಮದು ಸುಂಕ ಏರಿಕೆಗೆ ರಾಜ್ಯದ ಸಂಸದರು ಕೂಡಲೇ ಗಮನಹರಿಸಬೇಕು ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಮುಖಂಡ ಜಿ.ವಿ. ಶ್ರೀರಾಮರೆಡ್ಡಿ ಆಗ್ರಹಿಸಿದರು.

ಸ್ಥಳೀಯ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ಬಳಿ ಭಾನುವಾರ ನಡೆದ ರೇಷ್ಮೆ ಆಮದು ಸುಂಕ ಇಳಿಕೆಯನ್ನು ವಿರೋಧಿಸಿ ನಡೆದ ಅಂಚೆ ಕಾರ್ಡ್ ರವಾನೆ ಚಳವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೇಷ್ಮೆ ಬೆಳೆಯುವ ಪ್ರಮುಖ ಜಿಲ್ಲೆಗಳ ಇಬ್ಬರು ಕೇಂದ್ರ ಸಚಿವರು, ಕೇಂದ್ರ ಸರಕಾರದಲ್ಲಿದ್ದೂ ಸಹ ರೇಷ್ಮೆ ಆಮದು ಸುಂಕ ಇಳಿಕೆಯಿಂದ ರೇಷ್ಮೆ ಬೆಳೆಯುವ ಲಕ್ಷಾಂತರ ರೈತರ ಬಾಳು ಹಾಳಾಗುತ್ತದೆ ಎಂದರೆ ಅದು ನಮ್ಮ ದುರದೃಷ್ಟವೇ ಸರಿ. ಈ ನಮ್ಮ ಸಂಸದರು ಮುಂಬರುವ ಬಜೆಟ್ ಅಧಿವೇಶನದಲ್ಲಾದರೂ ರೇಷ್ಮೆ ಆಮದು ಸುಂಕವನ್ನು ಹಿಂದಿನಂತೆಯೇ ಮುಂದುವರೆಸುವ ಬಗ್ಗೆ ಈಗಲಾದರೂ ಹೋರಾಟ ನಡೆಸಬೇಕಾಗಿದೆ ಎಂದು ಅವರು ಒತ್ತಾಯಿಸಿದರು.

ರೇಷ್ಮೆ ಹಿತರಕ್ಷಣಾ ವೇದಿಕೆಯ ಮುಖಂಡ ಮಳ್ಳೂರು ಶಿವಣ್ಣ ಮಾತನಾಡಿ, ಸುಂಕವನ್ನು ಏರಿಸುವ ಸಮಯದಲ್ಲಿ ರೈತರು ಮಂಜಾಗರೂಕತೆಯಿಂದ ಪ್ರತಿಭಟನೆ ನಡೆಸಿದರೂ, ಆಮದು ಸುಂಕ ವಿಚಾರವನ್ನು ಮುಂದೂಡುತ್ತಲೇ ಹೋಗಲಾಗುತ್ತಿದೆ.  ಮುಂದಿನ ಚುನಾವಣೆಗಳಲ್ಲಿ ರೈತರು ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ರೇಷ್ಮೆ ಹಿತರಕ್ಷಣಾ ವೇದಿಕೆಯ ಸಂಚಾಲಕ ಜಿ.ಎಂ. ಕಲ್ಯಾಣ್ ಕುಮಾರ್, ಭಾರತ ಜನಜಾಗೃತಿ ಸೇನೆಯ ಜಿಲ್ಲಾಧ್ಯಕ್ಷ ಅಶ್ವತ್ಥಪ್ಪ, ಹೊಸಕೋಟೆ ತಾಲ್ಲೂಕು ರೇಷ್ಮೆ ಹಿತರಕ್ಷಣಾ ವೇದಿಕೆ ಸಂಚಾಲಕ ಕೃಷ್ಣಪ್ಪ ಉಪಸ್ಥಿತರಿದ್ದರು.

ರಾಜ್ಯದಾದ್ಯಂತ ಒಂದು ಲಕ್ಷ ಅಂಚೆ ಕಾರ್ಡ್‌ಗಳನ್ನು ಪ್ರಧಾನಮಂತ್ರಿ ಕಚೇರಿಗೆ ರವಾನಿಸುವ ಚಳವಳಿ ಅಂಗವಾಗಿ ಮುದ್ರಿತ ಅಂಚೆ ಪತ್ರಗಳನ್ನು ರೇಷ್ಮೆ ಬೆಳೆಯುವ ರೈತರು ಹಾಗೂ ಉದ್ದಿಮೆದಾರರಿಗೆ ವಿತರಿಸಲಾಯಿತು.

ಅಖಿಲ ಭಾರತ ಹೋರಾಟ ಸಮಿತಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ರೇಷ್ಮೆ ಹಿತರಕ್ಷಣಾ ವೇದಿಕೆಯ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.