ADVERTISEMENT

ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ದೇವನಹಳ್ಳಿ ತಾಲ್ಲೂಕಿನಾದ್ಯಂತ ಶೇಕಡ 95 ರಷ್ಟು ಪಠ್ಯಪುಸ್ತಕ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 27 ಮೇ 2014, 11:20 IST
Last Updated 27 ಮೇ 2014, 11:20 IST
ದೇವನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕೊಠಡಿಯೊಂದರಲ್ಲಿ ವಿವಿಧ ಶಾಲೆಗಳ ಶಿಕ್ಷಕರು ಪಠ್ಯ ಪುಸ್ತಕಗಳನ್ನು ಪಡೆದರು
ದೇವನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕೊಠಡಿಯೊಂದರಲ್ಲಿ ವಿವಿಧ ಶಾಲೆಗಳ ಶಿಕ್ಷಕರು ಪಠ್ಯ ಪುಸ್ತಕಗಳನ್ನು ಪಡೆದರು   

ದೇವನಹಳ್ಳಿ: ತಾಲ್ಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಿಗೆ ಸಮವಸ್ತ್ರ ವಿತರಣೆ ಕಾರ್ಯ ಆರಂಭವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮುನಿ­ರಾಜು ತಿಳಿಸಿದರು. ಶೈಕ್ಷಣಿಕ ಸಾಲಿನ ಸಿದ್ದತೆ ಕುರಿತು ಮಾತನಾಡಿದ ಅವರು, ‘2014–15 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಕ್ರಿ­ಯೆಗಳು ಮೇ 30 ರಿಂದ ಆರಂಭ­ವಾಗಲಿವೆ. ಈ ದಿಸೆಯಲ್ಲಿ ತಾಲ್ಲೂಕಿನ ಒಟ್ಟು 284 ಶಾಲೆಗಳಿಗೆ ಈವರೆವಿಗೂ 16,570 ಪಠ್ಯಪುಸ್ತಕಗಳನ್ನು ವಿತ­ರಿಸಲಾಗಿದೆ ಎಂದು  ವಿವರಿಸಿದರು.

ಪುಸ್ತಕ ವಿತರಣೆ ಮಾಡಿರುವ ಶಾಲೆ­ಗಳಲ್ಲಿ ತಾಲ್ಲೂಕಿನ 118 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, 93­ಸರ್ಕಾರಿ ಹಿರಿಯ ಪ್ರಾಥಮಿಕ, 18 ಸರ್ಕಾರಿ ಪ್ರೌಢಶಾಲೆ ಹಾಗೂ ಖಾಸಗಿ ಕಿರಿಯ, ಹಿರಿಯ ಮತ್ತು ಪ್ರೌಢ­ಶಾಲೆಗಳು ಸೇರಿವೆ ಎಂದರು. 10 ಖಾಸಗಿ ಶಾಲೆಗಳು ಇನ್ನೂ ಪಠ್ಯ­ಪುಸ್ತಕ ಪಡೆದುಕೊಂಡಿಲ್ಲ. ಈಗಾಗಲೇ ಶೇ 95 ರಷ್ಟು ಪಠ್ಯಪುಸ್ತಕ ವಿತ­ರಣೆ­ಯಾಗಿದೆ.

ಒಂದನೇ ತರಗತಿಯ ಇಂಗ್ಲಿಷ್‌, 2 ನೇ ತರಗತಿಯ ಗಣಿತ, ನಾಲ್ಕನೇ ತರಗತಿ ಗಣಿತ, 8 ನೇ ತರಗತಿ ಕನ್ನಡ ಮತ್ತು ಹತ್ತನೇ ತರಗತಿಯ ವಿಜ್ಞಾನ ವಿಷಯದ ಪಠ್ಯಪುಸ್ತಕಗಳನ್ನು ಇನ್ನೂ ಪೂರೈಕೆ ಮಾಡಬೇಕಿದೆ ಎಂದರು. ಮಕ್ಕಳ ತರಗತಿಗನುಗುಣವಾಗಿ 1–2, 3–4, 5 ರಿಂದ 7, 8ರಿಂದ 10ರಲ್ಲಿ ವ್ಯಾಸಂಗಕ್ಕೆ ದಾಖಲಾಗಿರುವ ವಿದ್ಯಾರ್ಥಿ­ಗಳಿಗೆ ಈ ಹಿಂದೆ ನಿಗದಿಪಡಿಸಿದಂತೆ ಅಗ­ತ್ಯಕ್ಕೆ ಅನುಗುಣವಾಗಿ ಉಚಿತ ಸಮ­ವಸ್ತ್ರಕ್ಕಾಗಿ ತೆಳುನೀಲಿ ಮತ್ತು ಮತ್ತು ಅಪ್ಪಟ ನೀಲಿ ಬಣ್ಣದ ಬಟ್ಟೆ ವಿತ­ರಿಸ­ಲಾಗು­ತ್ತಿದೆ.

ಶಾಲೆ ಆರಂಭಕ್ಕೆ ಮುನ್ನ ಪುಸ್ತಕ ಮತ್ತು ಸಮವಸ್ತ್ರ ಸಿದ್ಧತೆ ಮಾಡಿ­ಕೊಂಡು ಮೇ 30 ರಂದು ವಿತರಿಸುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದರು. ಈಗಾಗಲೇ ಇಲಾಖೆ ನಿರ್ದೇಶನದಂತೆ ಮೇ 30 ರಂದು ಶಾಲೆ ಆರಂಭಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.