ADVERTISEMENT

ವೈಜ್ಞಾನಿಕ ಕೃಷಿಯಿಂದ ಉತ್ತಮ ಫಸಲು

ರೈತ ಕೃಷ್ಣಪ್ಪ ಅವರ ಒಂಬತ್ತು ಎಕರೆ ಜಮೀನಿನಲ್ಲಿ 230 ಮೂಟೆ ರಾಗಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 6:55 IST
Last Updated 7 ಮಾರ್ಚ್ 2018, 6:55 IST
ಬೆಸ್ತಮಾನಹಳ್ಳಿಯ ರೈತ ಕೃಷ್ಣಪ್ಪ ಅವರ ರಾಗಿ ರಾಶಿಗೆ ಪೂಜೆ ಸಲ್ಲಿಸಲಾಯಿತು
ಬೆಸ್ತಮಾನಹಳ್ಳಿಯ ರೈತ ಕೃಷ್ಣಪ್ಪ ಅವರ ರಾಗಿ ರಾಶಿಗೆ ಪೂಜೆ ಸಲ್ಲಿಸಲಾಯಿತು   

ಆನೇಕಲ್‌: ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಂಡು ಉತ್ತಮ ರಾಗಿ ಫಸಲು ಬೆಳೆಯುವಲ್ಲಿ ತಾಲ್ಲೂಕಿನ ಬೆಸ್ತಮಾನಹಳ್ಳಿಯ ರೈತ ಕೃಷ್ಣಪ್ಪ ಯಶಸ್ವಿಯಾಗಿದ್ದಾರೆ ಎಂದು ಕೃಷಿ ಇಲಾಖೆಯ ಅಧಿಕಾರಿ ಶಕುಂತಲಾ ಬಿರಾದಾರ್‌ ತಿಳಿಸಿದರು.

ಅವರು ತಾಲ್ಲೂಕಿನ ಬೆಸ್ತಮಾನಹಳ್ಳಿಯ ರೈತ ಕೃಷ್ಣಪ್ಪ ಅವರ ರಾಗಿ ರಾಶಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಕೃಷ್ಣಪ್ಪ ಅವರು ಒಂಬತ್ತು ಎಕರೆ ಜಮೀನಿನಲ್ಲಿ 230 ಮೂಟೆ ರಾಗಿ ಬೆಳೆದಿದ್ದು, ಉತ್ತಮ ದಾಖಲೆಯಾಗಿದೆ. ಕೃಷಿ ಇಲಾಖೆಯಿಂದ ಬಿತ್ತನೆ ರಾಗಿ ಪಡೆದು ಜಿಪ್ಸಂ, ಜಿಂಕ್ ಮತ್ತಿತರ ಗೊಬ್ಬರಗಳನ್ನು ಬಳಸಿ ವೈಜ್ಞಾನಿಕ ವಿಧಾನ ಅಳವಡಿಸಿದ್ದರು.

ADVERTISEMENT

ಕೂರಿಗೆ ಬಿತ್ತನೆ ಮಾಡಿದ್ದರು ಮತ್ತು ಕಟಾವು ಯಂತ್ರವನ್ನು ಬಳಸಿ ಕೊಯ್ಲು ಮಾಡಿದ್ದರು. ರೈತರಿಗೆ ಕೃಷಿ ಇಲಾಖೆಯು ಸಂಪೂರ್ಣ ಮಾರ್ಗದರ್ಶನ ನೀಡಿತ್ತು. ಇಲಾಖೆಯ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸಿದ್ದರಿಂದ ಉತ್ತಮ ಫಸಲು ಬಂದಿರುವುದು ಸಂತಸ ತಂದಿದೆ. ರಾಗಿ ಉತ್ತಮ ಗುಣಮಟ್ಟದಲ್ಲಿದೆ. ರಾಗಿ ಬೆಳೆಯ ಬಗ್ಗೆ ತಾತ್ಸರ ಹೊಂದಿರುವ ಇಂದಿನ ದಿನಗಳಲ್ಲಿ ಕೃಷ್ಣಪ್ಪ ಅವರು ರಾಗಿ ಬೆಳೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಪ್ರಗತಿ ಪರ ರೈತ ಕೃಷ್ಣಪ್ಪ ಮಾತನಾಡಿ, ‘ಕೃಷಿ ಇಲಾಖೆಯ ಸಹಕಾರದಿಂದ ಹಾಗೂ ಅವರ ಮಾರ್ಗದರ್ಶನದಲ್ಲಿ ಒಂಬತ್ತು ಎಕರೆ ಜಮೀನಿನಲ್ಲಿ ರಾಗಿ ಬೆಳೆ ಬೆಳೆಯಲಾಗಿತ್ತು. ಕೂಲಿ ಆಳುಗಳು ದೊರೆಯುವುದು ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಕಟಾವು ಯಂತ್ರ ನಮಗೆ ನೆರವಿಗೆ ಬಂದಿತು. ಕೂರಿಗೆ ಬಿತ್ತನೆ ಮಾಡಿದ್ದರಿಂದ ಕಳೆ ಕೀಳಲು ಯಂತ್ರ ಬಳಸಲು ಸುಲಭವಾಗಿತ್ತು. ಹಾಗಾಗಿ ಕಷ್ಟ ಪಟ್ಟು ಕೆಲಸ ಮಾಡಿದ್ದರಿಂದ ಉತ್ತಮ ಫಸಲು ಬಂದಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ರೈತರು ಸಾಂಪ್ರದಾಯಿಕ ಕೃಷಿ ವಿಧಾನಗಳ ಜೊತೆಗೆ ಆಧುನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಕಡಿಮೆ ನೀರಿನಲ್ಲಿ ರಾಗಿ ಬೆಳೆ ಬೆಳೆಯಲು ಸಾಧ್ಯ ಎಂದರು.
***
ಕ್ವಿಂಟಲ್‌ ರಾಗಿ ₹2,300

ಆನೇಕಲ್‌ನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಮಾಡಲು ಕೇಂದ್ರ ತೆರೆಯಲಾಗಿದೆ. 2017–18ನೇ ಸಾಲಿಗೆ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ ರಾಗಿಗೆ ₹1,900 ನಿಗದಿ ಮಾಡಿದೆ. ರಾಜ್ಯ ಸರ್ಕಾರ ವಿಶೇಷ ಪ್ರೋತ್ಸಾಹ ಧನವಾಗಿ ₹400 ನೀಡುತ್ತಿದ್ದು, ಒಟ್ಟು ಪ್ರತಿ ಕ್ವಿಂಟಲ್‌ಗೆ 2,300 ಬೆಂಬಲ ಬೆಲೆ ನಿಗದಿ ಪಡಿಸಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌, ಕೆಂಗೇರಿ, ಯಲಹಂಕ, ಕೃಷ್ಣರಾಜಪುರಗಳಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಖರೀದಿ ಪ್ರಕ್ರಿಯೆಯು ಮಾರ್ಚ್‌‌ 31ರ ವರೆಗೂ ಚಾಲ್ತಿಯಲ್ಲಿರುತ್ತದೆ. ಖರೀದಿ ಕೇಂದ್ರಕ್ಕೆ ತರುವ ರಾಗಿಯು ಒಣಗಿರಬೇಕು. ಕ್ರಿಮಿ ಕೀಟಗಳಿಂದ ಮುಕ್ತವಾಗಿರಬೇಕು. ಗುಣಮಟ್ಟದ ರಾಗಿಯನ್ನು 50 ಕೆಜಿ ಗೋಣೀಚೀಲದಲ್ಲಿ ತುಂಬಿಸಿ ಖರೀದಿ ಕೇಂದ್ರಕ್ಕೆ ತರಬೇಕು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.