ದೇವನಹಳ್ಳಿ: ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನವನ್ನು ಸ್ಥಳಿಯರು ಒತ್ತುವರಿ ಮಾಡಿಕೊಂಡಿದ್ದರೂ ಸಂಬಂಧಪಟ್ಟ ಇಲಾಖೆ ಸ್ವಾಧಿನ ಪಡೆಯುವಲ್ಲಿ ವಿಫಲವಾಗಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುನಿಶಾಮೇಗೌಡ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಾಲೆಯು 1952ರಲ್ಲಿ ಆರಂಭವಾಗಿದೆ. ಒಂದರಿಂದ ಏಳನೇ ತರಗತಿವರೆಗೆ ಒಟ್ಟು 70 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಈ ಶಾಲೆಯ 100*200 ಅಡಿ ವಿಸ್ತೀರ್ಣ ಹೊಂದಿದೆ. 1994-95 ರಲ್ಲಿ ವಿಶ್ವನಾಥಪುರ ಗ್ರಾ. ಪಂ.ಯಿಂದ ಇದಕ್ಕೆ ಖಾತೆ ಮಾಡಿಕೊಡಲಾಗಿದೆ.
ಈ ಜಾಗದಲ್ಲಿ ಒತ್ತುವರಿ ಆಗಿದ್ದು ಈ ಸಂಬಂಧ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗೆ 30.1.2010 ರಂದು ದಾಖಲೆ ಸಹಿತ ಮನವಿ ಮಾಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗೂ ಪೂರಕ ದಾಖಲೆಯೊಂದಿಗೆ ತಿಳಿಸಲಾಗಿದೆ ಆದರೆ ಪ್ರಯೋಜನವಾಗಿಲ್ಲ ಎಂದು ದೂರಿದರು.
ಕೂಡಲೇ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಶಾಲಾಭಿವೃದ್ಧಿ ಪದಾಧಿಕಾರಿ, ಸ್ತ್ರಿಶಕ್ತಿ ಗುಂಪು, ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿ ಬ್ಯಾಡರಹಳ್ಳಿ ಗ್ರಾಮದಿಂದ ಕಾಲ್ನಡಿಗೆ ಜಾಥಾ ನಡೆಸಿ ಮಿನಿವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಶಾಲಾಭಿವೃದ್ಧಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಎಸ್‌ಡಿಎಂಸಿ ಉಪಾಧ್ಯಕ್ಷೆ ಅನುಸೂಯಮ್ಮ, ಸದಸ್ಯ ಮಂಜುನಾಥ್, ದೇವರಾಜ್, ಬೈರೇಗೌಡ, ರವೀಂದ್ರ ಶೋಭಾ, ಮಂಜುಳಮ್ಮ, ಲಕ್ಷ್ಮಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.