ADVERTISEMENT

ಶಾಲೆಯ ಎದುರ್ಲ್ಲಲೇ ಚರಂಡಿ: ಪ್ರವೇಶ ಬಂದ್!

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST

ಆನೇಕಲ್: ತಾಲ್ಲೂಕಿನ ಬೊಮ್ಮಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಗ್ರಾಮದ ಚರಂಡಿ ನೀರು ನಿಂತು ವಿದ್ಯಾರ್ಥಿಗಳು ಶಾಲೆಯ ಒಳಗೆ ಪ್ರವೇಶಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಮಸ್ಯೆಯ ಪರಿಹಾರಕ್ಕಾಗಿ ಗ್ರಾಮದವರಾದ ವಿಧಾನ ಪರಿಷತ್ ಸದಸ್ಯ ಬಿ.ಟಿ.ದಯಾನಂದ ರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೇಜಶ್ರೀ ನಟರಾಜ್ ಅವರು ಭಾನುವಾರ ಸ್ಥಳೀಯ ಅಧಿಕಾರಿಗಳೊಂದಿಗೆ ಸ್ಥಳದ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಬಿ.ಟಿ.ದಯಾನಂದರೆಡ್ಡಿ ಮಾತನಾಡಿ, ಹಲವು ತಿಂಗಳಿನಿಂದ ಚರಂಡಿ ನೀರು ನಿಂತಿರುವುದರಿಂದ ಸ್ವಚ್ಛತೆಯಿಲ್ಲದೇ ಮಕ್ಕಳಿಗೆ ರೋಗಗಳು ಬರುವ ಸಾಧ್ಯತೆ ಇದೆ. ಆದ್ದರಿಂದ ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮದ ಚರಂಡಿ ನೀರು ಹರಿದು ಹೋಗುತ್ತಿದ್ದ ಸ್ಥಳವನ್ನು ಖಾಸಗಿಯವರು ಮುಚ್ಚಿದ್ದರಿಂದ ನೀರು ಹರಿದು ಮುಂದೆ ಹೋಗದೆ ಶಾಲೆಯ ಸುತ್ತ ನಿಂತು ಕೊಳಚೆ ಪ್ರದೇಶವಾಗಿದೆ. ಖಾಸಗಿಯವರ ಜಮೀನಿನಲ್ಲಿ ಈ ಹಿಂದೆ ನೀರು ಹರಿದು ರಾಜಕಾಲುವೆ ಸೇರುತ್ತಿತ್ತು.  ಈ ಬಗ್ಗೆ ಮುಖಂಡರು ಚರ್ಚಿಸಿ, ಖಾಸಗಿಯವರಿಗೆ ಪರ್ಯಾಯ ಸ್ಥಳ ನೀಡಿ, ಹಿಂದಿನಂತೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.

ಸ್ಥಳದಲ್ಲಿ ಹಾಜರಿದ್ದ ತಹಶೀಲ್ದಾರ್ ಶಿವೇಗೌಡ ಅವರು ಜಿಲ್ಲಾಧಿಕಾರಿಗಳಿಗೆ ವರದಿ ಮಾಡಿ ಬದಲಿ ವ್ಯವಸ್ಥೆಗೆ ಶಿಫಾರಸು ಮಾಡುವುದಾಗಿ ತಿಳಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ವೀರಭದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆರ್.ಬಸವರಾಜ ಮತ್ತಿತರರು ಹಾಜರಿದ್ದರು.

ಇಂದು ಆನೆಲಿಂಗೇಶ್ವರ ಜಾತ್ರೆ: ತಾಲ್ಲೂಕಿನ ಹುಸ್ಕೂರಿನ ಆನೆ ಲಿಂಗೇಶ್ವರ (ಬೀರೇಶ್ವರ ಸ್ವಾಮಿ) ಜಾತ್ರಾ ಮಹೋತ್ಸವ ಸೋಮವಾರ ನಡೆಯಲಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ಸಮಾಜ ಕಲ್ಯಾಣ ಸಚಿವ ಎ.ನಾರಾಯಣ ಸ್ವಾಮಿ, ಜವಳಿ ಖಾತೆ ಸಚಿವ ವರ್ತೂರು ಪ್ರಕಾಶ್, ಸಂಸದ ಎಚ್.ವಿಶ್ವನಾಥ್, ಮಾಜಿ ಸಚಿವ ಎಚ್.ಎಂ. ರೇವಣ್ಣ, ಮಾಜಿ ಶಾಸಕ ಎಂ.ಟಿ.ಬಿ.ನಾಗರಾಜು, ಕುರುಬರ ಸಂಘದ ಅಧ್ಯಕ್ಷ ಶಾಂತಪ್ಪ, ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಕಾಗಿನೆಲೆ ಗುರು ಪೀಠದ ಆಡಳಿತಾಧಿಕಾರಿ ಗೋವಿಂದಪ್ಪ ಮತ್ತಿತರರು ಪಾಲ್ಗೊಳ್ಳುವರು. ಮಧ್ಯಾಹ್ನ ಒಂದು ಘಂಟೆಗೆ ಹೊಳೆ ದಾಟಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

 ಇಂದು ಕಾರ್ಮಿಕರ ಸಮಾವೇಶ

ದೊಡ್ಡಬಳ್ಳಾಪುರ:  ಕಾರ್ಮಿಕ ಸಂಘಟನೆಗಳು ಫೆ.28ರಂದು ಕರೆ ನೀಡಿರುವ ಅಖಿಲ ಭಾರತ ಮುಷ್ಕರದ ಹಿನ್ನೆಲೆಯಲ್ಲಿ ಸಿಐಟಿಯು  ತಾಲ್ಲೂಕು ಸಮಿತಿ ಕಾರ್ಯಕರ್ತರ ಸಮಾವೇಶ ಸೋಮವಾರ ನಡೆಯಲಿದೆ. ನಗರದ ಕನ್ನಡ ಜಾಗೃತ ಭವನದಲ್ಲಿ ಸಮಾವೇಶ ನಡೆಯಲಿದೆ. 
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್. ಉಮೇಶ್, ಜಿಲ್ಲಾ ಕಾರ್ಯರ್ಯದರ್ಶಿ ಪ್ರತಾಪ್ ಸಿಂಹ, ತಾಲ್ಲೂಕು ಅಧ್ಯಕ್ಷ ರೇಣುಕಾರಾಧ್ಯ, ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್ ಮತ್ತಿತರರು ಭಾಗವಹಿಸಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT