ಆನೇಕಲ್: ಶಾಲಾ ಕೊಠಡಿಯಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಇಡಲಾಗಿದೆ ಎಂದು ಭಾವಿಸಿ ಕೆಲ ಕಿಡಿಗೇಡಿಗಳು ಪಟ್ಟಣದ ಎಎಸ್‌ಬಿ ಸರ್ಕಾರಿ ಪ್ರೌಢಶಾಲೆಯ ಕೊಠಡಿಗಳ ಬೀಗ ಮುರಿದು ಪ್ರಶ್ನೆ ಪತ್ರಿಕೆಗಳಿಗಾಗಿ ಹುಡುಕಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಸೋಮವಾರ ಪೂರಕ ಪರೀಕ್ಷೆಯಿತ್ತು. ಈ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆಗಳು ಸಿಗಬಹುದೆಂದು ಶಾಲೆಯ ಕಚೇರಿ ಹಾಗೂ ಸಿಬ್ಬಂದಿ ಕೊಠಡಿಗಳ ಬೀಗ ಮುರಿದು ಪ್ರಶ್ನೆಪತ್ರಿಕೆಗಾಗಿ ಹುಡುಕಾಡಿ ಬೇಸ್ತುಬಿದ್ದಿದ್ದಾರೆ.
ಶಿಕ್ಷಕರು ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದಂತೆಯೇ ಬೀಗ ಮುರಿದ ಕೊಠಡಿಗಳು ಕಂಡವು. ಆದರೆ ಬೇರಾವುದೇ ವಸ್ತುಗಳು ಕಳುವಾಗಿರಲಿಲ್ಲ.
ಸೋಮವಾರ ನಡೆದ ಪೂರಕ ಪರೀಕ್ಷೆಯಲ್ಲಿ 177 ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದರು. `ಬೀಗ ಮುರಿದು ಪ್ರಶ್ನೆಪತ್ರಿಕೆ ಕಳವು ಮಾಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಪ್ರಶ್ನೆಪತ್ರಿಕೆಗಳನ್ನು ಪ್ರತಿದಿನ ಪರೀಕ್ಷೆಗೆ ಮುಂಚಿತವಾಗಿ ಖಜಾನೆಯಿಂದ ತರಲಾಗುತ್ತದೆ' ಎಂದು ಶಿಕ್ಷಕರು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.