ADVERTISEMENT

`ಸಂಘಟನೆಗಳು ಬಡವರ ಉದ್ಧಾರಕ್ಕೆ ಶ್ರಮಿಸಲಿ'

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 6:16 IST
Last Updated 2 ಜುಲೈ 2013, 6:16 IST

ಆನೇಕಲ್: `ಹೋರಾಟಗಳ ಜೊತೆಗೆ ಸಂಘಟನೆಗಳು ಬಡವರ ಹಾಗೂ ದಲಿತರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು' ಎಂದು ಪ್ರಜಾ ವಿಮೋಚನಾ ಚಳವಳಿ (ಸಮತವಾದ) ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಹೇಳಿದರು.

ಆನೇಕಲ್ ತಾಲ್ಲೂಕಿನ ರಾಯಸಂದ್ರ ಹಾಗೂ ನಾಗನಾಥಪುರದಲ್ಲಿ ಸಂಘಟನೆಯ ನೂತನ ಶಾಖೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, `ಸ್ವಾತಂತ್ರ್ಯ ಬಂದು 65 ವರ್ಷ ಕಳೆದರೂ ನಮ್ಮ ದೇಶದಲ್ಲಿ ಜಾತಿ ಪದ್ಧತಿ, ಅಸಮಾನತೆ ಹಾಗೂ ಭ್ರಷ್ಟಾಚಾರ ತೊಲಗಿಲ್ಲ' ಎಂದು ವಿಷಾದಿಸಿದರು.

ಆನೇಕಲ್‌ನಲ್ಲಿ 19 ವರ್ಷ ಆಡಳಿತ ನಡೆಸಿದ ಬಿಜೆಪಿ ಶಾಸಕರು ಡಾ.ಬಿ. ಆರ್. ಅಂಬೇಡ್ಕರ್ ಭವನ ನಿರ್ಮಾಣ ಮಾಡುವಲ್ಲಿ ವಿಫಲವಾಗಿದ್ದಾರೆ. ನೂತನ ಶಾಸಕ ಬಿ. ಶಿವಣ್ಣನವರಾದರೂ ಇತ್ತ ಗಮನ ಹರಿಸಿ ಭವನದ ತ್ವರಿತ ನಿರ್ಮಾಣಕ್ಕೆ ಮುಂದಾಗಬೇಕು' ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿಆಂಜನಪ್ಪ ಮಾತನಾಡಿ, `ಶಿಕ್ಷಣ ಇಂದು ವ್ಯಾಪಾರೀಕರಣವಾಗಿದ್ದು ಹಣವಿಲ್ಲದೆ ಬಡವರು ಹಾಗೂ ದಲಿತರು ವಿದ್ಯೆ ಕಲಿಯುವುದು ಕಷ್ಟಕರವಾಗಿದೆ. ಬಡವರು ಕೂಡಾ ಸುಲಭವಾಗಿ ಉನ್ನತ ಶಿಕ್ಷಣ ಪಡೆಯುವಂತಹ ವ್ಯವಸ್ಥೆ ಜಾರಿಗೆ ತರಬೇಕು' ಎಂದು ಒತ್ತಾಯಿಸಿದರು.

ಬೆಂಗಳೂರು ವಿಭಾಗೀಯ ಶಾಖೆಯ ಪ್ರಧಾನ ಕಾರ್ಯದರ್ಶಿ ಕೆ. ಎಲ್. ಶಂಕರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಿವಿಸಿ (ಎಸ್) ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಎಸ್.ಭಾಸ್ಕರ್ ಶೆಟ್ಟಿ, ಬೆಂಗಳೂರು ವಿಭಾಗೀಯ ಶಾಖೆಯ ಅಧ್ಯಕ್ಷ ಬಸವರಾಜು, ಗ್ರಾ.ಜಿಲ್ಲಾ ಅಧ್ಯಕ್ಷ ಮುನಿಕೃಷ್ಣಪ್ಪ, ನಗರ ಜಿಲ್ಲಾ ಕಾರ್ಯಧ್ಯಕ್ಷ ವೈ.ಕೃಷ್ಣಪ್ಪ, ನಾಗರಾಜು, ಕೊಪ್ಪ ರಾಮಾಂಜಿ, ಭವಾನಿ, ಪ್ರಸಾದ, ಪ್ರವೀಣ್ ಮತ್ತು ಗಜೇಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.