ADVERTISEMENT

ಸಮಾಜ ಸೇವೆ: ಮಹಿಳೆಯರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ವಿಜಯಪುರ: `ಮನೆ, ಮಂದಿ, ಮಕ್ಕಳು ಎಂಬ ಮನೋಭಾವನೆ ರೂಢಿಸಿಕೊಂಡು ಯಾಂತ್ರಿಕ ಜೀವನದಲ್ಲಿಯೇ ಮಹಿಳೆಯು ತನ್ನ ಜೀವನವನ್ನು ದೂಡುವ ಬದಲಿಗೆ, ಬಿಡುವಿನ ವೇಳೆಯನ್ನು ಸಮಾಜ ಸೇವೆಯಲ್ಲಿ ತೊಡಗಬೇಕು~ ಎಂದು ಬೆಂಗಳೂರಿನ ಕೇಂದ್ರ ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಸುನಂದಬಸಪ್ಪ ಕರೆ ನೀಡಿದರು.

ಅವರು ಇಲ್ಲಿನ ನಗರೇಶ್ವರಸ್ವಾಮಿ ದೇವಾಲಯದ ಪ್ರಾರ್ಥನಾಮಂದಿರದಲ್ಲಿ ಹಮ್ಮಿಕೊಂಡಿದ್ದ ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಮಹಿಳಾ ಸಂಘ, ವಿಜಯಪುರ ಘಟಕದ ಸರ್ವಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

`ಮಹಿಳೆಯರಲ್ಲಿ ಮಾನವೀಯ ಸಂಬಂಧಗಳ ಉಳಿಸಿಕೊಳ್ಳಬೇಕೆನ್ನುವ ಒತ್ತಡವಿದ್ದರೂ ಸಮಾಜದ ಏಳಿಗೆಗೆ ದುಡಿಯಬಲ್ಲ ಸ್ಫೂರ್ತಿ ಇರಬೇಕು. ಯುವಪೀಳಿಗೆಯಲ್ಲಿ ಸೇವಾ ಮನೋಭಾವನೆಯನ್ನು ವೃದ್ಧಿಸಬೇಕಾದ ಅನಿವಾರ್ಯತೆ ಮಹಿಳೆಯ ಮೇಲಿದೆ~ ಎಂದು ಅವರು ತಿಳಿಸಿದರು.

`ನಾನು, ನನ್ನದೆಂಬ ಭಾವನೆಗಿಂತಲೂ ನಮ್ಮದೆಂಬ ಭಾವನೆಯು ವಿಶಾಲವಾದುದು. ಅದರಿಂದಲೇ ಆತ್ಮಸಂತೃಪ್ತಿ ದೊರೆಯುವುದು. ಮಹಿಳಾ ಸಂಘಟನೆಯು ಮಾದರಿಯಾಗಬೇಕು~ ಎಂದರು.

ನಿರ್ಗಮಿತ ಅಧ್ಯಕ್ಷೆ ರೂಪಾಭಾಸ್ಕರ್ ಮಾತನಾಡಿ, `ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಂಘದ ಚಟುವಟಿಕೆಗಳಲ್ಲಿ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿದರು.

ಬೆಂಗಳೂರಿನ ಕೇಂದ್ರ ನಗರ್ತ ಮಹಿಳಾ ಸಂಘದ ಕಾರ್ಯದರ್ಶಿ ಶೈಲಜಾ ಉದಯಶಂಕರ್, ಮಾರ್ಗದರ್ಶಕ ಸಿ.ಬಸಪ್ಪ, ಪಿ.ಚಂದ್ರಪ್ಪ ಮಾತನಾಡಿದರು, ಖಜಾಂಚಿ ಸುಧಾಹರ್ಷ ಅವರು ಜಮಾ-ಖರ್ಚು ವಿವರಗಳನ್ನು ಮಂಡಿಸಿ ಅನುಮೋದನೆ ಪಡೆದರು. ಸಂಘದ ಕಾರ್ಯದರ್ಶಿ ಸವಿತಾಮುರಳೀಧರ್ ನಿರೂಪಿಸಿ, ವರದಿ ಮಂಡಿಸಿದರು.

ಸಂಘದ ಉಪಾಧ್ಯಕ್ಷೆ ಶೀಲಾಸುರೇಶ್, ನಗರ್ತ ಯುವಕಸಂಘದ ಮಾಜಿ ಅಧ್ಯಕ್ಷ ಸಿ.ಭಾಸ್ಕರ್, ಎಂ.ಶಿವಪ್ರಸಾದ್, ಸುರೇಶ್, ವಿನಯ್, ಇನ್ನರ್‌ವೀಲ್ ಸಂಘದ ಪದಾಧಿಕಾರಿಗಳು ಇದ್ದರು. ಭಾರತಿ ಪ್ರಭುದೇವ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.