ADVERTISEMENT

ಸರ್ಕಾರಿ ಜಮೀನಿನಲ್ಲಿದ್ದ ಅಕ್ರಮ ಕಟ್ಟಡ ತೆರವು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2012, 5:35 IST
Last Updated 23 ಆಗಸ್ಟ್ 2012, 5:35 IST

ದೊಡ್ಡಬಳ್ಳಾಪುರ: ನಗರದ ಕೊಂಗಾಡಿಯಪ್ಪ ರಸ್ತೆಯಲ್ಲಿನ ಸರ್ವೇ.ನಂ. 66ರಲ್ಲಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಒತ್ತುವರಿದಾರರನ್ನು ತೆರವುಗೊಳಿಸಲಾಯಿತು.

ಸುಮಾರು 2 ಕೋಟಿ ರೂ ಮೌಲ್ಯದ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಚಂದ್ರ ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಜೆಸಿಬಿ ಯಂತ್ರದಿಂದ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಸ್ವತ್ತನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆ, ಕಚೇರಿ ಹಾಗೂ ಕಾಂಪೌಂಡ್‌ಗಳನ್ನು ಕೆಡವಲಾಗಿದೆ. ತಾಲ್ಲೂಕಿನಲ್ಲಿ ಯಾವುದೇ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರೂ ಸಾರ್ವಜನಿಕರು ದೂರು ನೀಡಿದರೆ ಸರ್ಕಾರ ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಎಚ್ಚರಿಸಿದ್ದಾರೆ.

ಸರ್ವೇ ನಂ. 67/2ರ ಮಾಲೀಕರಾದ ಕೆಆರ್‌ಎನ್ ಲೋಕ, ಪಲ್ಲ ಲಕ್ಷ್ಮೀಕುಮಾರ್, ಡಿ.ಗಣೇಶ್ ಎಂಬುವವರು ಸರ್ಕಾರಿ ಜಮೀನಿನ ಸರ್ವೇ ನಂ. 66 ರ 24 ಗುಂಟೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಲಾಗಿದೆ ಎಂದು ದೂರು ನೀಡಿದ್ದರು.

 ಈ ದೂರಿನ ಹಿನ್ನೆಲೆಯಲ್ಲಿ ಒತ್ತುವರಿದಾರರನ್ನು ತೆರವುಗೊಳಿಸಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾ ಆಡಳಿತ ಈ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.